ದ.ಕ.ಜಿಲ್ಲೆಯಲ್ಲಿ ಎಂಆರ್‌ಎಫ್ ಘಟಕ ಸ್ಥಾಪನೆ: ಸಂಸದರ,ಸಚಿವರ ಉಪಸ್ಥಿತಿಯಲ್ಲಿ ಸಭೆ

ಮಂಗಳೂರು : ರಾಜ್ಯದಲ್ಲಿಯೇ ಪ್ರಥಮವಾಗಿ ಬೆಂಗಳೂರಿನ ಗ್ರಾಮೀಣ ಭಾಗದ ಜಿಗಣಿಯಲ್ಲಿ ಒಣ ಕಸಗಳಾದ ಪ್ಲಾಸ್ಟಿಕ್, ರಟ್ಟು, ಗಾಜಿನ ಬಾಟಲ್‌ಗಳು ಸೇರಿದಂತೆ ಮತ್ತಿತರ ವಸ್ತುಗಳ ಮರು ಉತ್ಪಾದನೆ ಮಾಡಿ ಆರ್ಥಿಕ ಲಾಭ ಗಳಿಸಲಾಗಿದೆ. ಅದಕ್ಕೆ ಪೂರಕವಾಗಿ ಇದೀಗ ರಾಜ್ಯ ಸರಕಾರವು ಪೈಲೆಟ್ ಕಾರ್ಯಕ್ರಮದಡಿ ದ.ಕ.ಸಹಿತ ರಾಮನಗರ, ಉಡುಪಿ, ಬಳ್ಳಾರಿ ಜಿಲ್ಲೆಗಳಲ್ಲಿ ಎಂಆರ್‌ಎಫ್ ಘಟಕಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ದ.ಕ.ಜಿಪಂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಅಡಿಯಲ್ಲಿ ಎಂ.ಆರ್.ಎಫ್ ಘಟಕ ಅನುಷ್ಠಾನಗೊಳಿಸುವ ಬಗ್ಗೆ ದ.ಕ. ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತ್ಯಾಜ್ಯವನ್ನು ಸಂಗ್ರಹಿಸುವಾಗಲೇ ವೈಜ್ಞಾನಿಕವಾಗಿ ಹಸಿ ಹಾಗೂ ಒಣ ತ್ಯಾಜ್ಯ ಬೇರ್ಪಡಿಸಿದರೆ ಹಸಿಕಸದಿಂದ ಗೊಬ್ಬರ ಹಾಗೂ ಒಣಕಸದಿಂದ ಮರು ಉತ್ಪಾದನೆ ಮಾಡಲು ಸಾಧ್ಯವಿದೆ. ಇದರಿಂದ ಆರ್ಥಿಕ ಲಾಭವನ್ನೂ ಗಳಿಸಬಹುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.

ಸಂಸದ ನಳಿನ್ ಕುಮಾರ್ ಕಟೀಲ್ ಕಟೀಲ್ ಮಾತನಾಡಿ ಜಿಲ್ಲೆಯ ಗಂಜೀಮಠ ಗ್ರಾಪಂ ವ್ಯಾಪ್ತಿಯ ಉಳಿಪಾಡಿ ಗ್ರಾಮದಲ್ಲಿ 2.50 ಕೋ.ರೂ.ವೆಚ್ಚದಲ್ಲಿ ಎಂಆರ್‌ಆಫ್ ಘಟಕ ನಿರ್ಮಾಣ ಆಗಲಿದೆ. ಸ್ಥಳೀಯ ಗ್ರಾಪಂ ಜನಪ್ರತಿನಿಧಿಗಳ ಸಹಿತ 50ಕ್ಕೂ ಹೆಚ್ಚು ಜನರನ್ನು ಜಿಗಣಿಯ ಎಂ.ಆರ್.ಎಫ್ ಘಟಕಕ್ಕೆ ಹಾಗೂ ನಿಟ್ಟೆಯ ಘಟಕಕ್ಕೆ ಅಧ್ಯಯನ ಪ್ರವಾಸ ಕರೆದುಕೊಂಡು ಹೋಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.,ದ.ಕ.ಜಿಪಂ ಸಿಇಒ ಡಾ. ಕುಮಾರ್, ಶಾಸಕ ಭರತ್ ವೈ ಶೆಟ್ಟಿ, ರಾಮಕೃಷ್ಣ ಮಿಷನ್‌ನ ಏಕಗಮ್ಯಾನಂದ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.