ಸೌದಿ ಅರೇಬಿಯಾದಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ ಹೇರಿದ ಸರಕಾರ

ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಕಡಿಮೆ ಮಾಡುವುದಕ್ಕೆಸೌದಿ ಅರೇಬಿಯಾದಲ್ಲಿ ಕಠಿಣ ನಿಯಮವನ್ನು ಜಾರಿಗೊಳಿಸಲಾಗಿದೆ.

ದಿನದಲ್ಲಿ ಎರಡೇ ಬಾರಿ ಧ್ವನಿವರ್ಧಕ ಬಳಕೆ ಮಾಡಬೇಕು, ಅದು ಕೂಡ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಶಬ್ದ ಮಾಡಿ ಅದರ ಬಳಕೆ ಮಾಡಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೌದಿ ಅರೇಬಿಯಾ ಆದೇಶ ಹೊರಡಿಸಿದೆ.

ಅಜಾನ್ (ಪ್ರಾರ್ಥನೆಗಾಗಿ ಕರೆ) ಮತ್ತು ಇಕಾಮಾತ್‌ಗೆ (ಪ್ರಾರ್ಥನೆ ಸಲ್ಲಿಸುವ ಇಮಾಮ್ ತಮ್ಮ ಜಾಗಕ್ಕೆ ಆಗಮಿಸಿದ್ದಾರೆ ಎಂದು ಹೇಳುವ ಸಲುವಾಗಿನ ಎರಡನೆಯ ಬಾರಿಯ ಪ್ರಾರ್ಥನೆ) ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು, ಧ್ವನಿವರ್ಧಕಗಳ ಶಬ್ದವನ್ನು ಗರಿಷ್ಠ ಮಟ್ಟದ ಮೂರನೇ ಒಂದು ಭಾಗಕ್ಕೆ ಸೀಮಿತಗೊಳಿಸಬೇಕು ಎಂದು ಸೂಚಿಸಿದೆ ಎನ್ನಲಾಗಿದೆ.

ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವ ಅಬ್ದುಲ್‌ ಲತೀಫ್‌ ಅಲ್‌-ಶೇಖ್‌ ಅವರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಮಸೀದಿಗಳು ಸುತ್ತೋಲೆಯಲ್ಲಿನ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದಿದ್ದಾರೆ.

ಷರಿಯಾ ನಿಯಮಗಳ ಪ್ರಕಾರ, ಪ್ರಾರ್ಥನೆಯ ಸಮಯದಲ್ಲಿ ಇಮಾಮ್‌ನ ಧ್ವನಿಯನ್ನು ಮಸೀದಿಯೊಳಗಿನ ಎಲ್ಲರೂ ಕೇಳಬೇಕು. ಆದರೆ ಹೊರಗಿನ ನೆರೆಹೊರೆಯ ಮನೆಗಳಲ್ಲಿನ ಜನರು ಇದನ್ನು ಕೇಳುವ ಅಗತ್ಯವಿಲ್ಲ. ಪ್ರಾರ್ಥನೆಯ ಸಮಯದಲ್ಲಿ ಮಸೀದಿಗಳು ಜೋರಾಗಿ ಧ್ವನಿವರ್ಧಕ ಬಳಕೆ ಮಾಡುತ್ತಿರುವ ಕಾರಣ, ರೋಗಿಗಳು, ವೃದ್ಧರು ಮತ್ತು ಹತ್ತಿರ ವಾಸಿಸುವ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ.

ಆದ್ದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಕೂಡ ಕಳೆದ ಮಾರ್ಚ್‌ ತಿಂಗಳಿನಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನಿಯಮ ಪ್ರಕಟಿಸಿದ್ದು, ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸುವುದಕ್ಕೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಮಸೀದಿಗಳಲ್ಲಿ ಆಜಾನ್​ ಮತ್ತು ಇತರ ಪ್ರಮುಖ ಪ್ರಕಟಣೆಗಳಿಗೆ ಮಾತ್ರವೇ ಧ್ವನಿವರ್ಧಕ ಬಳಸಬೇಕು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಬಳಕೆಗೆ ಅವಕಾಶವಿಲ್ಲ. ಆಸ್ಪತ್ರೆ, ಶೈಕ್ಷಣಿಕ ಕೇಂದ್ರಗಳ ಸುತ್ತ ಮುತ್ತಲಿನ 100 ಮೀಟರ್​ ಜಾಗವನ್ನು ಸೈಲೆನ್ಸ್​ ಝೋನ್​ ಎಂದು ಕರೆಯಲಾಗಿದೆ. ಈ ಪ್ರದೇಶದಲ್ಲಿ ಧ್ವನಿವರ್ದಕ ಬಳಕೆಗೆ ಅವಕಾಶವಿಲ್ಲ ಎಂದು ಬೋರ್ಡ್​ ಪ್ರಕಟಣೆಯಲ್ಲಿ ತಿಳಿಸಿದೆ. ಒಂದು ವೇಳೆ ಈ ನಿಯಮಗಳನ್ನು ತಪ್ಪಿದಲ್ಲಿ ಅದಕ್ಕೆ ಸೂಕ್ತ ದಂಡವನ್ನು ವಿಧಿಸುವುದಾಗಿಯೂ ತಿಳಿಸಲಾಗಿದೆ.

1 Comment
  1. Abdul latif al sheik says

    Fake news

Leave A Reply

Your email address will not be published.