ರಾಜಕೀಯ ಗಿಮಿಕ್ ಬೇಡ -ಉರಿಯಾದರೆ ಬರ್ನಾಲ್ ಹಚ್ಚಿಕೊಳ್ಳಿ – ಕಾಂಗ್ರೆಸ್ ಗೆ ಸುಳ್ಯ ಬಿಜೆಪಿ ಅಧ್ಯಕ್ಷರ ತಿರುಗೇಟು

ಸುಳ್ಯದಲ್ಲಿ ಸಚಿವರ ವಾರ್ ರೂಮ್ ಮೂಲಕ ಸೇವಾಭಾರತಿಯ ಸಹಯೋಗದಲ್ಲಿ ಕೋವಿಡ್ ನ ಎರಡನೆಯ ಅಲೆಯ ಸಂದರ್ಭದಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೂ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಸೇವೆಯ ಅರ್ಥವೇ ಗೊತ್ತಿಲ್ಲದ ಕಾಂಗ್ರೆಸ್ಸಿಗರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಎಲ್ಲಿಯೂ ಮೂಗು ತೂರಿಸಲಾಗದ ಕಾಂಗ್ರೆಸ್ಸಿಗರು ಇದೀಗ ಲಸಿಕಾ ಕೇಂದ್ರದ ವ್ಯವಸ್ಥೆಯಲ್ಲಿ ಗೊಂದಲವನ್ನು ಸೃಷ್ಟಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸುಳ್ಯದ ಸ್ವಯಂಸೇವಕರು ಗಳ ಕಾರ್ಯದಿಂದ ಉರಿ ಉಂಟಾದಲ್ಲಿ ಬರ್ನಾಲ್ ಹಚ್ಚಿಕೊಳ್ಳಲಿ ಎಂದು ಸಚಿವರ ವಾರ್ ರೂಮ್ ಸಂಚಾಲಕ ಹಾಗೂ ಮಂಡಲ ಬಿಜೆಪಿ ಅಧ್ಯಕ್ಷ ಶ್ರೀ ಹರೀಶ್ ಕಂಜಿಪಿಲಿ ತಿರುಗೇಟು ನೀಡಿದ್ದಾರೆ.

ಕೋವಿಡ್ ನ ಎರಡನೇ ಅಲೆಯ ಸಂದರ್ಭದಲ್ಲಿ ಸುಳ್ಯದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸೇವಾ ಭಾರತಿ ಯ ಸಹಕಾರದೊಂದಿಗೆ ಸಚಿವರ ವಾರ್ ರೂಮನ್ನು ಆರಂಭಿಸಿದ್ದು ಕಳೆದ 45 ದಿನಗಳಿಂದ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಲಾಕ್ಡೌನ್ ಕಾಲದಲ್ಲಿ ಅವಶ್ಯ ಉಳ್ಳವರಿಗೆ ಮನೆಮನೆಗೆ ಮೆಡಿಸಿನ್ ತಲುಪಿಸುವ ವ್ಯವಸ್ಥೆ, ಅವಶ್ಯಕ ವಸ್ತುಗಳ ಪೂರೈಕೆ, ಕರೋನಾ ಪಾಸಿಟಿವ್ ಕಾರಣದಿಂದ ಕ್ವಾರಂಟೈನ್ ಆದ ಮನೆಗಳಿಗೆ ಸರಕಾರದ ಪಡಿತರವನ್ನು ತಲುಪಿಸುವ ವ್ಯವಸ್ಥೆಯನ್ನು ಕ್ಷೇತ್ರದಾದ್ಯಂತ ಸ್ವಯಂಸೇವಕರು ಮಾಡುತ್ತಿದ್ದಾರೆ.

ಅವಶ್ಯವುಳ್ಳ ರೋಗಿಗಳಿಗೆ ರಕ್ತ ಪೂರೈಸುವ ವ್ಯವಸ್ಥೆಯನ್ನು ಮಾಡುತ್ತಿದ್ದು ಸಾವಿರದ ನೂರಕ್ಕೂ ಹೆಚ್ಚು ಜನ ರಕ್ತದಾನಿಗಳು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡಿದ್ದಾರೆ. ಈಗಾಗಲೇ 150ಕ್ಕೂ ಹೆಚ್ಚು ಯುನಿಟ್ ರಕ್ತ ಪೂರೈಕೆಯನ್ನು ಮಾಡಲಾಗಿದೆ. ಕರೋನಾ ಕಾರಣದಿಂದ ಮೃತಪಟ್ಟ ಶವಗಳ ಸಂಸ್ಕಾರವನ್ನು ಸೇವಾ ಭಾರತಿ ಯ ಹಾಗೂ ವಾರ್ ರೂಮ್ ಕಾರ್ಯಕರ್ತರು ನೆರವೇರಿಸುತ್ತಿದ್ದು ಸುಳ್ಯದಲ್ಲಿ ಒಂದೇ ತಂಡದವರು 14 ಶವಗಳ ಸಂಸ್ಕಾರವನ್ನು ಈಗಾಗಲೆ ಮಾಡಿರುತ್ತಾರೆ. ಅಲ್ಲದೆ ಗ್ರಾಮಾಂತರ ಪ್ರದೇಶದಲ್ಲಿಯೂ ಕೋವಿಡ್ ನಿಯಮಗಳ ಅನುಸಾರ ಶವಸಂಸ್ಕಾರ ಮಾಡಲು ಮನೆಯವರಿಗೆ ಸಹಕಾರ ನೀಡುತ್ತಿದ್ದಾರೆ.

ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದೊಂದಿಗೆ ಕ್ಷೇತ್ರದಾದ್ಯಂತ ಹತ್ತಕ್ಕೂ ಹೆಚ್ಚು ಆಂಬುಲೆನ್ಸ್ ಗಳ ಉಚಿತ ಸೇವೆಯನ್ನು ನೀಡಲಾಗುತ್ತಿದೆ. ಏಪ್ರಿಲ್ 26ರಿಂದ ಲಸಿಕಾ ಕೇಂದ್ರದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದು ಆಸನದ ವ್ಯವಸ್ಥೆ ಕುಡಿಯುವ ನೀರಿನ ವ್ಯವಸ್ಥೆ,ಲಸಿಕಾ ಕೇಂದ್ರದ ಸಿಬ್ಬಂದಿಗಳಿಗೆ,ಅಧಿಕಾರಿಗಳಿಗೆ, ಲಸಿಕೆಗೆ ಕಾಯುತ್ತಿರುವ ಅಶಕ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ, ಎಷ್ಟೇ ಜನರ ನೂಕುನುಗ್ಗಲು ಇದ್ದರೂ ಅದರ ಸೂಕ್ತ ನಿರ್ವಹಣೆ, ಲಸಿಕಾ ಕೇಂದ್ರಕ್ಕೆ ದಿನವಹಿ ಲಭಿಸುವ ಲಸಿಕೆಗಳನ್ನು ಅದೇ ದಿನ ಅರ್ಹರಿಗೆ ತಲುಪಿಸಲು ಜಾಗೃತಿಯ ವ್ಯವಸ್ಥೆಯನ್ನು ವಾರ್ ರೂಮ್ ಸ್ವಯಂಸೇವಕರು ಮಾಡುತ್ತಿದ್ದಾರೆ.

ಲಸಿಕಾ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆಯಾದಾಗ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆಸ್ವತಹ ನಗರ ಪಂಚಾಯತ್ ಅಧ್ಯಕ್ಷರು ಕಂಪ್ಯೂಟರ್ ಮುಂದೆ ಕುಳಿತು ನೋಂದಣಿಯ ಕಾರ್ಯವನ್ನು ನಡೆಸಿದ್ದಾರೆ. ನಮ್ಮ ಕಾರ್ಯಕರ್ತರ ಪಡೆಯು ಜೀವದ ಹಂಗು ತೊರೆದು ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದರೆ ಕಾಂಗ್ರೆಸ್ ನಾಯಕರು ಲಸಿಕಾ ಕೇಂದ್ರಕ್ಕೆ ಭೇಟಿ ಕೊಟ್ಟು ಫೋಟೋಗೆ ಪೋಸ್ ನೀಡುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲಾ ಜನತೆಗೂ ಉಚಿತ ಲಸಿಕೆಯನ್ನು ನೀಡುವ ಮಹತ್ತರ ಕಾರ್ಯವನ್ನು ಮಾಡುತ್ತಿದ್ದು ದೇಶದ 20 ಕೋಟಿಗೂ ಹೆಚ್ಚು ಜನಕ್ಕೆ ಈಗಾಗಲೇ ಪ್ರಥಮ ಹಂತದ ಲಸಿಕೆಯನ್ನು ನೀಡಲಾಗಿದೆ. ದೇಶದಾದ್ಯಂತ ಲಸಿಕಾ ಕಾರ್ಯಕ್ರಮದ ಆರಂಭದಲ್ಲಿ ಲಸಿಕೆಯ ಕುರಿತು ವ್ಯವಸ್ಥಿತ ಅಪಪ್ರಚಾರ ಮಾಡಿದ ಕಾಂಗ್ರೆಸ್ಸಿಗರು ಇದೀಗ ಲಸಿಕಾ ಕಾರ್ಯಕ್ರಮದ ಯಶಸ್ಸಿನ ಕಾರಣದಿಂದ ಹತಾಶೆಗೊಂಡು ಆಧಾರವಿಲ್ಲದ ಆಪಾದನೆಗಳನ್ನು ಮಾಡುತ್ತಿದ್ದಾರೆ.


ಕಾಂಗ್ರೆಸ್ಸಿಗರು ಮಾಡುತ್ತಿರುವ ಅಪಪ್ರಚಾರವು ಹಾಗು ಆರೋಪವು ಕಾಂಗ್ರೆಸ್ಸಿನ ಟೂಲ್ ಕಿಟ್ ಪ್ರಚಾರದ ಒಂದು ಭಾಗವಾಗಿದೆ. ಪುರಭವನದಲ್ಲಿ ಲಸಿಕಾ ಕೇಂದ್ರದ ಆರಂಭದಲ್ಲಿ ಅಲ್ಲಿಗೆ ಭೇಟಿ ನೀಡಿ ನಮ್ಮ ಕಾರ್ಯಕರ್ತರು ನೀಡಿದ ಊಟವನ್ನು ಸವಿದು ಈ ರೀತಿಯ ಸೇವಾಕಾರ್ಯವನ್ನು ನಿಮ್ಮಿಂದ ಮಾತ್ರ ಮಾಡಲು ಸಾಧ್ಯ ಎಂದು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ ವೆಂಕಪ್ಪ ಗೌಡರು ಇದೀಗ ನಮ್ಮ ಕಾರ್ಯಕರ್ತರ ಮೇಲೆ ಆರೋಪ ಹೊರಿಸುತ್ತಿರುವುದು ಹಾಸ್ಯಾಸ್ಪದ.

ಕಾಂಗ್ರೆಸ್ಸಿನ ಇನ್ನೋರ್ವ ನಾಯಕ ಪಿ ಎಸ್ ಗಂಗಾಧರ ರವರ ಪತ್ನಿ ಲಸಿಕಾ ಕೇಂದ್ರಕ್ಕೆ ಬಂದಾಗ ಅವರನ್ನು ಸರತಿಸಾಲಿನಲ್ಲಿ ಕುಳ್ಳಿರಿಸಿ ನಮ್ಮ ಕಾರ್ಯಕರ್ತರು ಲಸಿಕೆ ನೀಡಲು ಸಹಕರಿಸಿದ್ದಾರೆ. ಇದೀಗ ಅವರು ತನ್ನ ಪತ್ನಿಯನ್ನು ವಾಪಸು ಕಳುಹಿಸಿದ್ದಾರೆ ಎಂದು ಆರೋಪ ಮಾಡಿದ್ದು ಅವರಿಗೆ ಎಷ್ಟು ಜನ ಪತ್ನಿಯರಿದ್ದಾರೆ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕಿದೆ.

ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡುವಲ್ಲಿ ಕಮಿಷನ್ ವ್ಯವಹಾರ ನಡೆಯಬಹುದು ಎನ್ನುವ ಕಾಂಗ್ರೆಸ್ಸಿಗರ ಆಪಾದನೆಯು ಅವಿವೇಕತನ ದ್ದಾಗಿದೆ.

ಸಚಿವರ ವಾರ್ ರೂಮ್ ಕಡೆಯಿಂದ ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿದ್ದು, 2 ದಿನಗಳ ಹಿಂದೆ ಖಾಸಗಿ ಅಂಬುಲೆನ್ಸ್ ಚಾಲಕರೊಬ್ಬರು ಸರಕಾರಿ ಆಸ್ಪತ್ರೆಯಿಂದ ಕೊಡಿಯಾಲಬೈಲು ಸ್ಮಶಾನಕ್ಕೆ ಶವ ಸಾಗಿಸಲು ರೂ.7000 ಶುಲ್ಕ ವಿಧಿಸಿರುವ ಬಗ್ಗೆ ದೂರು ಬಂದಿದ್ದು ಇದರ ಕಮಿಷನ್ ಯಾರಿಗೆ ಹೋಗಿದೆ ಎಂಬುದನ್ನು ತನಿಖೆ ನಡೆಸಬೇಕಿದೆ. ತಮ್ಮ ಕಮಿಷನ್ ಆದಾಯ ಗಳೆಲ್ಲವೂ ಬಂದ್ ಆಗಿರುವ ಬಗ್ಗೆ ಆತಂಕಗೊಂಡಿರುವ ಕಾಂಗ್ರೆಸಿಗರು ಈಗ ಸುಳ್ಳು ಆಪಾದನೆಗಳಲ್ಲಿ ತೊಡಗಿದ್ದು ಜನತೆಗೆ ಸತ್ಯ ಏನೆನ್ನುವುದು ತಿಳಿದಿದೆ.

ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಜನಪರ ಕಾರ್ಯಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗರು ಅಪಪ್ರಚಾರದ ಭಾಗವಾಗಿ ಅಧಿಕಾರಿಗಳಿಗೆ ಸುಳ್ಳು ದೂರು ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ. ಸೇವೆಯ ಅರ್ಥವೇ ಗೊತ್ತಿಲ್ಲದವರಿಂದ ಇದರಿಂದ ಹೆಚ್ಚಿನದನ್ನು ಜನತೆ ನಿರೀಕ್ಷಿಸಲೂ ಸಾಧ್ಯವಿಲ್ಲ.

ನಮ್ಮ ಕಾರ್ಯಕರ್ತರು ಇದರಿಂದ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಸೇವೆಗಳಿಂದ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಲಸಿಕಾ ಕೇಂದ್ರ ಹಾಗೂ ಇತರ ಕಡೆಗಳಲ್ಲಿ ನಮ್ಮ ಸೇವಾ ಕಾರ್ಯ ಇನ್ನು ಮುಂದೆಯೂ ಮುಂದುವರಿಯಲಿದೆ. ನಮ್ಮ ಸೇವೆಗಳಿಂದ ಉರಿಯುಂಟಾದವರು ಬರ್ನಾಲ್ ಹಚ್ಚಿ ಕೊಳ್ಳಲಿ ಎಂದು ಹರೀಶ್ ಕಂಜಿಪಿಲಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.