ಲಾಕ್ ಡೌನ್ ಹಿನ್ನೆಲೆ ಬಿಯರ್ ಮಾರಾಟದಲ್ಲಿ ಶೇ. 50 ಭಾರೀ ಕುಸಿತ

ಕೊರೊನಾ ಹಿನ್ನೆಲೆಯಲ್ಲಿ ಬಿಯರ್ ಮಾರಾಟದಲ್ಲಿ ಶೇ.50 ಕುಸಿದಿದೆ. ರಾಜ್ಯದಲ್ಲಿ 3,907 (ಸಿಎಲ್-2), 232 ಕ್ಲಬ್ (ಸಿಎಲ್-4), 1,037 ಹೋಟೆಲ್ ಮತ್ತು ಗೃಹ(ಸಿಎಲ್-7), 3,552 ಬಾರ್ ಆ್ಯಂಡ್ ರೆಸ್ಟೋರೆಂಟ್(ಸಿಎಲ್-9) ಹಾಗೂ 705 ಎಂಎಸ್‌ಐಲ್ (11ಸಿ) 438 ಇತರೆ ಸೇರಿ ಒಟ್ಟು 10,410 ಮದ್ಯದಂಗಡಿಗಳಿವೆ.

ಸಾಮಾನ್ಯ ದಿನಗಳಲ್ಲಿ ನಿತ್ಯ ಆಂದಾಜು 70 ಸಾವಿರ ಬಿಯರ್ ಬಾಕ್ಸ್ ಗಳು ಮಾರಾಟವಾಗುತ್ತಿತ್ತು. ಇದರಿಂದ ಇಲಾಖೆಗೆ 10 ಕೋಟಿ ರೂ.ಆದಾಯ ಬರುತ್ತಿತ್ತು. ಇದೀಗ ನಿತ್ಯ 25 – 30 ಸಾವಿರ ಬಾಕ್ಸ್‌ಗಳು ಸೇಲಾಗುತ್ತಿವೆ ಎಂದು ತಿಳಿದುಬಂದಿದೆ.

ಬೇಸಿಗೆ ಆರಂಭವಾಗಿದ್ದರಿಂದ ಬಿಯರ್ ಮಾರಾಟದಲ್ಲಿ ಸಾಮಾನ್ಯವಾಗಿ ಏರಿಕೆ ಕಾಣುತ್ತಿತ್ತು. ಇದನ್ನು ಮನಗಂಡು ಮಾಲೀಕರು ಹೆಚ್ಚು ಬಂಡವಾಳ ಹೂಡಿ ಬಿಯರ್ ಖರೀದಿಸಿ ತಮ್ಮ ಅಂಗಡಿಗಳಲ್ಲಿ ಸಂಗ್ರಹಿಟ್ಟಿದ್ದರು.

ಕೊರೊನಾ ನಿಯಂತ್ರಿಸಲು ಲಾಕ್‌ಡೌನ್ ಹೇರಿರುವುದರಿಂದ, ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದಾರೆ. ಶೀತ ಸಮಸ್ಯೆಯಿಂದ ಬಳಲುತ್ತಿರುವವರು ಕುಡಿಯಲು ಹಿಂದೇಟು ಹಾಕುತ್ತಿರುವುದರಿಂದ ಹಾಗೂ ಮಳೆಗಾಲ ಸಮೀಪಿಸುತ್ತಿರುವುದು ಸೇರಿ ಇತ್ಯಾದಿ ಕಾರಣಗಳಿಂದ ಬಿಯರ್ ಮಾರಾಟದಲ್ಲಿ ಕುಸಿತವಾಗಿದೆ.

ಬಿಯರ್‌ಕ್ಕಿಂತ ಇಂಡಿಯನ್ ಮೇಡ್ ಲಿಕ್ಕರ್‌ಗೆ (ಐಎಂಎಲ್) ಹೆಚ್ಚು ಬೇಡಿಕೆ ಬಂದಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆಯಾಗಿ ಲಾಕ್ ಡೌನ್ ನಿಂದ ಬಾರ್ ಮಾಲೀಕರಿಗೆ ಮತ್ತು ಸರಕಾರಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ.

Leave A Reply

Your email address will not be published.