ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನೀಡುವ ಆಹಾರ ಧಾನ್ಯವನ್ನು ಸರಿಯಾಗಿ ವಿತರಣೆ ಮಾಡದೆ, ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಹುನಗುಂದ ತಾಲೂಕಿನ ಕರಡಿ ಗ್ರಾಮಸ್ಥರು, ಅಂಗನವಾಡಿ ಕೇಂದ್ರದ ಮಹಿಳಾ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಲಾಕ್ ಡೌನ್ ನೆಪದಲ್ಲಿ ಕಳೆದ ಎರಡು ತಿಂಗಳಿನಿಂದ ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರ ಧಾನ್ಯ ವಿತರಣೆ ಮಾಡಿಲ್ಲ, ಕೆಲವೊಂದು ಸಾಮಾಗ್ರಿಗಳನ್ನು ತಮ್ಮ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಎರಡು ತಿಂಗಳಿನಿಂದ ಕೆಲವು ಆಹಾರ ಸಾಮಗ್ರಿಗಳು ಹುಳು ಬಿದ್ದು ಹಾಳಾಗಿವೆ. ಇನ್ನು ಬಹಳಷ್ಟು ಮೊಟ್ಟೆಗಳ ಸಂಗ್ರಹ ಇದ್ದರೂ ವಿತರಣೆ ಮಾಡಿಲ್ಲ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಈ ರೀತಿಯ ಕಳ್ಳಸಾಗಾಣಿಕೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತೆ ಪುಷ್ಪಾ ಪಾದನಕಟ್ಟಿ ಎಂಬುವವರು ಕೊರೊನಾ ಹಿನ್ನೆಲೆಯಲ್ಲಿ ಮನೆಗೆ ಆಹಾರ ಸಾಮಗ್ರಿಗಳ ವಿತರಣೆ ಮಾಡುತ್ತಿಲ್ಲ, ಸಂಗ್ರಹವಾಗಿದ್ದ ಉತ್ತಮ ಗುಣಮಟ್ಟದ ಆಹಾರ ಧಾನ್ಯ ವಿತರಣೆ ಈಗಾಗಲೇ ಮಾಡಲಾಗಿದೆ.ರಾತ್ರಿ ಅಂಗನವಾಡಿ ತೆರೆದಿರದಿದ್ದರೂ,ಲಾರಿ ಮೂಲಕ ಬಂದ ಆಹಾರ ಸಾಮಗ್ರಿ ಇಳಿಸುವ ಕಾರ್ಯ ನಡೆದಿತ್ತು ಎಂದು ಸಮಾಜಾಯಿಸಿ ಹೇಳಿಕೆ ನೀಡಿದ್ದಾರೆ.