ಕೇವಲ ಒಬ್ಬ ಪ್ರಯಾಣಿಕನ ಹೊತ್ತು ಮುಂಬೈಯಿಂದ ದುಬೈಗೆ ಹಾರಿದ ವಿಮಾನ..!

ಮುಂಬೈ : ಮುಂಬೈಯಿಂದ ದುಬೈಗೆ ಪ್ರಯಾಣಿಸಲು ಎಮಿರೇಟ್ಸ್ ಫ್ಲೈಟ್ ಟಿಕೆಟ್ ಅನ್ನು ರೂ 18,000 ತೆತ್ತು ಖರೀದಿಸಿದ್ದ 40 ವರ್ಷದ ಭವೇಶ್ ಜವೇರಿ 360 ಸೀಟಿನ ಬೋಯಿಂಗ್ 777 ವಿಮಾನದಲ್ಲಿ ಮೇ 19ರಂದು ಏಕೈಕ ಪ್ರಯಾಣಿಕನಾಗಿದ್ದರು. ಮುಂಬೈಯಿಂದ ದುಬೈಗೆ ಇಲ್ಲಿಯ ತನಕ 240ಕ್ಕೂ ಅಧಿಕ ಬಾರಿ ಪ್ರಯಾಣಿಸಿರುವ ಅವರ ಇದೇ ಮೊದಲ ಬಾರಿ ಇಂತಹ ವಿಶೇಷ ಸವಲತ್ತು ಪಡೆದರು.

ಕಳೆದ 20 ವರ್ಷಗಳಿಂದ ಅವರು ದುಬೈ ನಿವಾಸಿಯಾಗಿರುವ ಭವೇಶ್ ಈ ಬಗ್ಗೆ ‘ನಾನು ಹಲವು ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದೇನೆ. ಆದರೆ ಇದು ಈವರೆಗಿನ ಅತ್ಯುತ್ತಮ ವಿಮಾನ ಪ್ರಯಾಣ’ ಎಂದಿದ್ದಾರೆ.

ವಿಶಿಷ್ಟ ಸವಲತ್ತನ್ನು ಆನಂದಿಸಲು ಕಾರಣವೇನು ಗೊತ್ತೇ?

ಭಾರತದಲ್ಲಿ ಕೋವಿಡ್ ಎರಡನೇ ಅಲೆಯಿಂದಾಗಿ ಸಂಯುಕ್ತ ಅರಬ್ ಸಂಸ್ಥಾನ ವಿಧಿಸಿದ ಪ್ರಯಾಣ ನಿರ್ಬಂಧಗಳನ್ವಯ ಯುಎಇ ಗೋಲ್ಡನ್ ವೀಸಾ ಹೊಂದಿರುವವರು ಹಾಗೂ ರಾಜತಾಂತ್ರಿಕ ಮಿಷನ್ ಸದಸ್ಯರು ಮಾತ್ರ ಭಾರತದಿಂದ ಅಲ್ಲಿಗೆ ತೆರಳಬಹುದಾಗಿದೆ.

ಭವೇಶ್ ಜವೇರಿ ಅವರು ಗೋಲ್ಡನ್ ವೀಸಾ ಕಾರ್ಡುದಾರರಾಗಿದ್ದು ಎಮಿರೇಟ್ಸ್ ಏರ್‍ಲೈನ್ಸ್‍ಗೆ ಕರೆ ಮಾಡಿ ನಂತರ ರೂ. 18,000 ತೆತ್ತು ಇಕಾನಮಿ ದರ್ಜೆಯ ಟಿಕೆಟ್ ಅನ್ನು ಪ್ರಯಾಣಕ್ಕಿಂತ ಒಂದು ವಾರ ಮುನ್ನ ಖರೀದಿಸಿದ್ದರು. ಸಾಮಾನ್ಯವಾಗಿ ಬಿಸಿನೆಸ್ ಕ್ಲಾಸಿನಲ್ಲಿ ಪ್ರಯಾಣಿಸುವ ಅವರ ಈ ಬಾರಿ ವಿಮಾನದಲ್ಲಿ ಕೆಲವೇ ಪ್ರಯಾಣಿಕರಿರುತ್ತಾರೆ ಎಂದು ಅಂದುಕೊಂಡು ಇಕಾನಮಿ ಕ್ಲಾಸ್ ಟಿಕೆಟ್ ಪಡೆದಿದ್ದರು. ಆದರೆ ನಿಲ್ದಾಣಕ್ಕೆ ತೆರಳಿದ್ದ ವೇಳೆ ಅವರ ಟಿಕೆಟ್‍ನಲ್ಲಿ ದಿನಾಂಕ ನಮೂದಿಸಲಾಗಿಲ್ಲ ಎಂದು ಟರ್ಮಿನಲ್ ಕಟ್ಟಡಕ್ಕೆ ಪ್ರವೇಶ ನಿರಾಕರಿಸಲಾಯಿತು. ಆಗ ಅವರು ಎಮಿರೇಟ್ಸ್ ಏರ್‍ಲೈನ್ಸ್‍ಗೆ ಕರೆ ಮಾಡಿದಾಗ ವಿಮಾನದ ಏಕೈಕ ಪ್ರಯಾಣಿಕರು ಆವರಾಗಿರುವುದರಿಂದ ಸಿಬ್ಬಂದಿ ಕಾಯುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತು.

ಆದರೆ ಒಬ್ಬನೇ ಪ್ರಯಾಣಿಕನಿಗಾಗಿ ರೂ. 8 ಲಕ್ಷದ ಇಂಧನವನ್ನು ಬಳಸಿ ವಿಮಾನ ಹಾರಾಟ ಮಾಡಲು ಏಕೆ ಎಮಿರೇಟ್ಸ್ ಏರ್‍ಲೈನ್ಸ್ ನಿರ್ಧರಿಸಿತು ಎಂಬ ಪ್ರಶ್ನೆಯಂತೂ ಇದ್ದೇ ಇದೆ.

Leave A Reply

Your email address will not be published.