ಕೊರೋನ ವಾರಿಯರ್ಸ್ ಆದ ನಡುಪದವಿನ ಯುವಕರು

ಕೋರೋನ ಕಾಲದಲ್ಲಿ ಎಷ್ಟೋ ಜನ ಜಾತಿ ಮತ ಭೇದವಿಲ್ಲದೆ ಪರಸ್ಪರ ಸಹಾಯ ಮಾಡುತ್ತಿದ್ದಾರೆ.ಅಂತೆಯೇ ಇಲ್ಲಿ‌ ನಡುಪದವು ಜಮಾಅತ್ ಜನತೆಯ ಕೈ ಹಿಡಿದಿದೆ. ಸರ್ವರಿಗೂ ಆರೋಗ್ಯ ಸೇವೆ ,ಅಗತ್ಯ ವಸ್ತುಗಳ ಪೂರೈಕೆ ಮಾಡಿದೆ.

 

ಬಂಟ್ವಾಳ ಕೈರಂಗಳ ಗ್ರಾಮದ ನಡುಪದವಿನ ಅಲ್ ಉಮರ್ ಜುಮಾ ಮಸೀದಿಯ ನಡುಪದವು ಜಮಾಅತ್ ಕಮಿಟಿಯು ಕೊರೋನ ನಿಯಂತ್ರಣ ಹಾಗೂ ಈ ಸಂಕಷ್ಟ ಕಾಲಘಟ್ಟದಲ್ಲಿ ಸ್ಥಳೀಯರ ಆರೋಗ್ಯ ರಕ್ಷಣೆ ಹಾಗೂ ಅಗತ್ಯ ವಸ್ತುಗಳ ಪೂರೈಕೆಗೆ ಮುಂದಾಗಿ ತಂಡದ ರೂಪದಲ್ಲಿ ಕಾರ್ಯನಿರ್ವಹಿಸುವ ಮೂಲಕ ಮಾದರಿಯಾಗಿದೆ.

ಮಸೀದಿಯ ಸಮಿತಿಯ ಅಧೀನದಲ್ಲಿ ಎಲ್ಲರಿಗೂ ಆರೋಗ್ಯ, ಆಹಾರ, ಶಿಕ್ಷಣ ಎಂಬ ಧ್ಯೇಯದಡಿಯಲ್ಲಿ ಕೊರೋನ ಸಂಕಷ್ಟದಲ್ಲಿ ಯಾರಿಗೂ ತೊಂದರೆ ಯಾಗದಂತೆ ತಂಡಗಳ ಮೂಲಕ ಕಾರ್ಯಾಚರಣೆ ನಡೆಸಿ ಮುನ್ನಡೆಯುತ್ತಿದೆ.’ನಡುಪದವು ಹೆಲ್ಪ್ ಸರ್ವಿಸ್’ ಎಂಬ ಸ್ಥಳೀಯ 30 ಯುವಕರ ತಂಡವನ್ನು ರಚಿಸಿ ಈಗಾಗಲೇ ಪ್ರತಿಯೊಬ್ಬರಿಗೂ ಆಯಾ ವ್ಯಾಪ್ತಿಯ ಮನೆಗಳ ಜವಾಬ್ದಾರಿಯನ್ನು ನೀಡಲಾಗಿದೆ.

ನಡುಪದವು ಜಮಾಅತ್‍ ನಲ್ಲಿ ಒಟ್ಟು 140 ನೋಂದಯಿತ ಮುಸ್ಲಿಂ ಮನೆಗಳಿವೆ. ಆದರೆ ಈ ಸೇವೆಯನ್ನು ಕೇವಲ ಮುಸ್ಲಿಂ ಮನೆಗಳಿಗೆ ಸೀಮಿತ ಮಾಡದೆ ಎಲ್ಲಾ ಧರ್ಮದವರಿಗೂ ಸೇವೆಯ ವ್ಯಾಪ್ತಿಯನ್ನು ವಿಸ್ತರಿಸಿದೆ.ಇದುವರೆಗೆ ಸುಮಾರು 250ಕ್ಕೂ ಹೆಚ್ಚಿನ ಮನೆಗಳಿಗೆ ಸೇವೆಯನ್ನು ತಂಡಗಳ ಮೂಲಕ ಒದಗಿಸಲಾಗುತ್ತಿದೆ.

ಅಲ್ಲದೆ ಕೊರೋನ ಸಂದರ್ಭದಲ್ಲಿ ಇತರ ಯಾವುದಾದರೂ ಕಾಯಿಲೆ ಇದ್ದರೂ ಜನರು ಆಸ್ಪತ್ರೆಗಳಿಗೆ ತೆರಳಲು ಹಿಂಜರಿಯುತ್ತಾರೆ. ಈ ಹಿನ್ನೆಲೆ ಯಲ್ಲಿಯೂ ಅಂತವರಿಗೆ ಧೈರ್ಯ ತುಂಬಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.ಅಗತ್ಯ ಔಷಧ ಪೂರೈಕೆಗೆ ಮೆಡಿಕಲ್ ಜ್ಞಾನ ಹೊಂದಿರುವ ಯುವಕರನ್ನು ನೇಮಿಸಲಾಗಿದೆ. ಅಗತ್ಯ ಮಾಹಿತಿಗಳಿಗಾಗಿ ವಾಟ್ಸಪ್ ಗ್ರೂಪಗಳಲ್ಲಿ ವಿಚಾರಗಳ ವಿನಿಮಯ ಮಾಡಲಾಗುತ್ತದೆ.

ಕೊರೋನ ಸಂಕಷ್ಟ ಕಾಲದಲ್ಲಿ ಜ್ವರ ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡಿದರೆ ಅದಕ್ಕಾಗಿ ಆರು ವಾಹನಗಳನ್ನು ಸಿದ್ದಪಡಿಸಲಾಗಿದ್ದು, ಇದಕ್ಕೆ ಚಾಲಕರ ತಂಡವನ್ನೂ ರೂಪಿಸಲಾಗಿದ್ದು, ಅನಾರೋಗ್ಯ ಪೀಡಿತರನ್ನು ಯಾವುದೇ ತೊಂದರೆಯಾಗದಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬರುವ ಜವಾಬ್ದಾರಿಯನ್ನು ನೀಡಲಾಗಿದೆ.

ಕೊರೋನ ಸೋಂಕಿತರು ಅಥವಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದವರಿಗೆ ಕ್ವಾರೈಂಟನ್‍ನಲ್ಲಿ ಇರಲು ಅಗತ್ಯವಾದರೆ ನಡುಪದವು ಮಸೀದಿಯ ಆವರಣದಲ್ಲಿರುವ ಕಟ್ಟಡದಲ್ಲಿ ಹಾಗೂ ಮದರಸದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಪ್ರತ್ಯೇಕ ಶೌಚಾಲಯ, ಕಿಚನ್ ವ್ಯವಸ್ಥೆ ಹಾಗೂ ಪ್ರಾಥಮಿಕ ಚಿಕಿತ್ಸೆಗೆ ಬೇಕಾಗುವ ಎಲ್ಲಾ ಮೆಡಿಕಲ್ ಕಿಟ್‍ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಕೆಲವು ಮನೆಯಲ್ಲಿ ಕುಟುಂಬಸ್ಥರ ನಡುವಿನಲ್ಲಿ ಸೋಂಕಿತರಿಗೆ ಅಥವಾ ಕ್ವಾರಂಟೈನ್ ನಲ್ಲಿರಲು ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರಿಗೆ ಇಲ್ಲಿ ವ್ಯವಸ್ಥೆಗೆ ಅನುಕೂಲವಾಗುತ್ತದೆ.
ಇಲ್ಲಿ ತಂಗುವವರ ಆರೋಗ್ಯವನ್ನು ವಿಚಾರಿಸಲು ಊರಿನಲ್ಲಿಯೇ ಇರುವ ಸರ್ಸಿಂಗ್, ಪ್ಯಾರಾ ಮೆಡಿಕಲ್ ಕಲಿತವರು ಸಹಾಯ ಮಾಡುತ್ತಿದ್ದಾರೆ. ಅಗತ್ಯ ಬಿದ್ದರೆ ಇಲ್ಲೇ ವೈದ್ಯರನ್ನು ಕರೆಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಜಮಾಅತ್ ಅಧ್ಯಕ್ಷ ಎನ್‍ಎಸ್ ನಾಸೀರ್ ನಡುಪದವು, ಕಾರ್ಯದರ್ಶಿ ಆಸೀಫ್ ಹಾಜಿ, ಕೋಶಾಧಿಕಾರಿ ಇಬ್ರಾಹಿಂ ನಡುಪದವು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಸೇವೆ ನಡೆಸಲಾಗುತ್ತಿದೆ.

ಹೀಗೆ ಪ್ರತಿಯೊಬ್ಬರು ಕೊರೋನ ಕಾಲದಲ್ಲಿ ಪರಸ್ಪರ ಸಹಾಯ ಮಾಡಿಕೊಳ್ಳುತ್ತಿರುವುದು ಈ ರೋಗದ ವಿರುದ್ಧದ ಸಮರದಲ್ಲಿ ಜಯ ಪಡೆದುಕೊಳ್ಳುವಂತೆಯೇ!!

Leave A Reply

Your email address will not be published.