ಬೆಳ್ಳಾರೆ ಕೊರೋನದಿಂದ ವ್ಯಕ್ತಿ ಮೃತ್ಯು | ಗೌರಿ ಹೊಳೆ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಸ್ಥಳೀಯರ ವಿರೋಧ | ಕೊಡಿಯಾಲ ಬೈಲಿನಲ್ಲಿ ವಿ.ಹಿಂ.ಪ, ಬಜರಂಗದಳದಿಂದ ಅಂತ್ಯ ಸಂಸ್ಕಾರ

ಕೊರೋನ ಪಾಸಿಟಿವ್ ಬಂದ ಬೆಳ್ಳಾರೆಯ ತಡಗಜೆಯ ನಿವಾಸಿಯೊಬ್ಬರು ಮಂಗಳವಾರ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರ ವನ್ನು ಗೌರಿಹೊಳೆಯ ರುದ್ರಭೂಮಿಯಲ್ಲಿ ನಡೆಸಲು ಗೌರಿಹೊಳೆ ನಿವಾಸಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಶವಸಂಸ್ಕಾರವನ್ನು ಸುಳ್ಯದ ಕೊಡಿಯಾಲಬೈಲು ಹಿಂದೂ ರುದ್ರಭೂಮಿ ವಿಮುಕ್ತಿಧಾಮಕ್ಕೆ ಸ್ಥಳಾಂತರಗೊಳಿಸಿದ ಘಟನೆ ವರದಿಯಾಗಿದೆ.

ಬೆಳ್ಳಾರೆ ತಡಗಜೆಯ ರಾಧಾಕೃಷ್ಣ ಕುಲಾಲ್ ಎಂಬವರು ಅಸೌಖ್ಯದಿಂದ ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು ಬೆಳ್ಳಾರೆ ಗೌರಿಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿಸಲು ಪಂಚಾಯಿತಿಯವರು ನಿರ್ಧರಿಸಿ ಗೌರಿಹೊಳೆಗೆ ಬಂದು ಸಿದ್ಧತೆ ಮಾಡತೊಡಗಿದರು. ಕೊರೋನ ರೋಗಿಯ ಮೃತದೇಹವನ್ನು ಇಲ್ಲಿಯ ಸ್ಮಶಾನಕ್ಕೆ ತರುವರೆಂಬ ಮಾಹಿತಿ ದೊರತ ಸ್ಥಳೀಯ ನಿವಾಸಿಗಳು ಸೇರಿ, ಮೃತದೇಹವನ್ನು ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದು. ಇಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ರುದ್ರಭೂಮಿ ಅಭಿವೃದ್ಧಿಯಾಗಿಲ್ಲ, ವ್ಯವಸ್ಥಿತವಾದ ಕಟ್ಟಡಗಳಿಲ್ಲ. ಆದುದರಿಂದ ಇಲ್ಲಿ ಅಂತ್ಯಸಂಸ್ಕಾರ ಮಾಡಬಾರದೆಂದು ಅವರು ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಬೆಳ್ಳಾರೆ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದು, ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಪಿ.ಡಿ.ಒ. ಭವ್ಯಶ್ರೀ , ಎ.ಎಸ್.ಐ. ಭಾಸ್ಕರ್, ಮತ್ತಿತರರು ಡಿ.ಸಿ. ಆದೇಶ ಮತ್ತು ಕೋರೋನ ಮಾರ್ಗಸೂಚಿಗಳ ಬಗ್ಗೆ ಹೇಳಿದರೂ ಸ್ಥಳೀಯರು ಒಪ್ಪದಿದ್ದುದರಿಂದ ಮೃತ ದೇಹವನ್ನು ಸುಳ್ಯ ಬಳಿಯ ಉಬರಡ್ಕ ಗ್ರಾಮಕ್ಕೊಳಪಡುವ ಕೊಡಿಯಾಲಬೈಲು ಹಿಂದೂ ರುದ್ರ ಭೂಮಿಗೆ ಕೊಂಡೊಯ್ಯಲಾಯಿತು.

ಅಲ್ಲಿ ವಿಶ್ವಹಿಂದೂ ಪರಿಷತ್-ಬಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆ ಮತ್ತು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ಅಂತ್ಯ ಸಂಸ್ಕಾರ ಮಾಡಲಾಗಿದೆ.

Leave A Reply

Your email address will not be published.