ವಧುವಿನ ಮನೆಗೆ ಬಂದಿಳಿಯಿತು ಇಬ್ಬರು ವರರ ದಿಬ್ಬಣ | ಯಾಕೆ ನಡೆಯಿತು ಈ ಹೈ ಡ್ರಾಮಾ ?!

ಮದುವೆ ಎಂದರೆ ಪ್ರತಿಯೊಬ್ಬರ ಜೀವನದ ಒಂದು ಪ್ರಮುಖ ಹೆಜ್ಜೆ. ಒಂದು ಹೊಸ ಜೀವನದ ಆರಂಭ ಎಂದರೆ ತಪ್ಪಾಗಲಾರದು. ಮನೆಗೆ ವರನ ಕುಟುಂಬ ದಿಬ್ಬಣ ಬಂದು ಮದುವೆ ಆಗಿ, ಸೊಸೆಯನ್ನು ಕರೆದುಕೊಂಡು ಹೋಗುವುದು ಸಾಮಾನ್ಯ. ಆದರೆ ಇಲ್ಲೊಂದು ಮದುವೆಗೆ ವಧುವಿನ ಮನೆಗೆ ಒಂದಲ್ಲ ಬದಲಾಗಿ ಎರಡು ದಿಬ್ಬಣ ಬಂದಿದೆ. ಮದುವೆ ಮನೆಯಲ್ಲಿ ಒಂದು ದೊಡ್ಡ ಡ್ರಾಮವೇ ನಡೆದಿದೆ.

ಉತ್ತರ ಪ್ರದೇಶದ ಕಜ್ ಗ್ರಾಮದಲ್ಲಿ ಇಂತದ್ದೊಂದು
ವಿಚಿತ್ರ ಘಟನೆ ನಡೆದಿದೆ. ಹುಡುಗಿಯ ಮನೆಯವರು ಹುಡುಗನೊಬ್ಬನನ್ನು ನಿಶ್ಚಯಿಸಿ, ಮದುವೆ ನಡೆಸುವ  ಸಂಭ್ರಮದಲ್ಲಿದ್ದರು. ಅದರಂತೆ ಮದುವೆಯ ದಿನ ವರನ ಕಡೆಯವರ ದಿಬ್ಬಣ ವಧು ಮನೆ ಬಾಗಿಲಿಗೆ ಬಂದಿದ್ದು, ಅದೇ ಸಂಭ್ರಮದಲ್ಲಿ ವಧುವಿನ ಕುಟುಂಬದವರು ದಿಬ್ಬಣವನ್ನು ಆದರದಿಂದ ಬರಮಾಡಿಕೊಂಡಿದ್ದಾರೆ. ಅದಾದ ಕೆಲವೇ ಕ್ಷಣಗಳಲ್ಲಿ ಇನ್ನೊಂದು ದಿಬ್ಬಣ ವಧುವಿನ ಮನೆ ಬಾಗಿಲಿಗೆ ಬಂದು ನಿಂತಿದೆ. ವಧುವಿನ ಜೊತೆಗೆ ಪ್ರೀತಿಯ ಬಂಧದಲ್ಲಿದ್ದ ಯುವಕ ತನ್ನ ಕುಟುಂಬಸ್ಥರನ್ನು ಕರೆದುಕೊಂಡು ಬಂದಿದ್ದಾನೆ. ಇದನ್ನು ಕಂಡ ಕುಟುಂಬಸ್ಥರು ಅಘಾತಕ್ಕೊಳಗಾಗಿದ್ದಾರೆ !!

ಮದುವೆ ಮನೆಯಲ್ಲಿ ಇಂತಹದ್ದೊಂದು ವಿಚಿತ್ರ ಘಟನೆ ನಡೆಯುತ್ತಿದೆ ಎಂದು ಯಾರೋ ಪೊಲೀಸರಿಗೆ ತಿಳಿಸಿದ್ದು, ಪೊಲೀಸರೂ ಸ್ಥಳಕ್ಕೆ ಸಮಯೋಚಿತವಾಗಿ ಬಂದಿದ್ದಾರೆ. ಎಲ್ಲರನ್ನೂ -ವಧು, ವರ ಮತ್ತು ವಧುವಿನ ಪ್ರಿಯಕರ ಈ ಮೂರೂ ಜನ ಮತ್ತು ಅವರ ಕುಟುಂಬದ ಹಿರಿಯರು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಪೊಲೀಸ್ ರು. ಮೂರೂ ಕುಟುಂಬದವರು ಮೊದಲು ಪರಸ್ಪರ ಜಗಳ ಮಾಡಿಕೊಂಡಿದ್ದಾರೆ. ನಂತರ ಪೊಲೀಸರು ರಾಜಿ ಮಾಡಿದ್ದು, ವಧುವಿಗೆ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿ, ಕಳುಹಿಸಿ ಕೊಟ್ಟಿದ್ದಾರೆ.

ಮದುವೆ ಕ್ಯಾನ್ಸಲ್ ಆದ ನೋವಿನಲ್ಲಿದ್ದ ವರನಿಗೆ ಅದೇ ಗ್ರಾಮದ ಕುಟುಂಬವೊಂದು ತಮ್ಮ ಮಗಳನ್ನು ಕೊಡಲು ನಿರ್ಧರಿಸಿದ್ದು, ಅಂದೇ ನವ ವಧುವಿನ ಮನೆ ಅಂಗಳದಲ್ಲೇ ಮದುವೆ ಕಾರ್ಯಕ್ರಮ ನಡೆದಿದೆ.

ಅಷ್ಟೇ ಅಲ್ಲದೆ, ವಧು ಮತ್ತು ಆತನ ಪ್ರಿಯಕರ ಇಬ್ಬರೂ ಕೂಡಿ ಹೆಣೆದ ಸ್ಕ್ರೀನ್ ಪ್ಲೇ ಇದು ಎನ್ನಲಾಗಿದೆ. ವಧು ತನ್ನ ಪೋಷಕರಲ್ಲಿ ತನ್ನ ಪ್ರೀತಿಯ ವಿಷಯವನ್ನು ಹೇಳಿದ್ದಳು ಆದರೆ ಪೋಷಕರು ಖಂಡತುಂಡವಾಗಿ ನಿರಾಕರಿಸಿದ್ದರು. ಆಗ ವಧು ಮತ್ತು ಆಕೆಯ ಗೆಳೆಯ ಸೇರಿಕೊಂಡು, ಈ ಡಬ್ಬಲ್ ದಿಬ್ಬಣದ ಡ್ರಾಮಾ ಮಾಡಿ, ಪ್ರಿಯಕರನ ಕಡೆಯವರನ್ನೆಲ್ಲ ಕರೆದುಕೊಂಡು ಬಂದಿದ್ದಾರೆ. ಅನಿವಾರ್ಯವಾಗಿ ಪ್ರಕರಣ ಪೊಲೀಸ್ ಮೆಟ್ಟಿಲು ಹತ್ತಿದೆ. ಒಂದು ದೊಡ್ಡ ಗುರುತರ ಸಮಸ್ಯೆಗೆ ಸರಿಯಾದ ಸಮಯಕ್ಕೆ ಬಂದು ಬಗೆಹರಿಸಿದ ಪೋಲಿಸ್ ಮತ್ತು ವರನಿಗೆ ಕೊನೆಯ ಗಳಿಗೆಯಲ್ಲಿ ಹೆಣ್ಣು ಕೊಟ್ಟವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ತನಗಿಷ್ಟವಾದ ಹುಡುಗನೊಂದಿಗೆ ಬದುಕು ಕಂಡುಕೊಳ್ಳಲು ಈ ವಧು ಹುಡುಕಿದ ಹೊಸ ಐಡಿಯಾ ಬಗ್ಗೆ ವ್ಯಾಪಕ ಮೆಚ್ಚುಗೆ ಕೇಳಿಬಂದಿದೆ.

Leave A Reply

Your email address will not be published.