ಆಕೆ ಲಾಟರಿಯಲ್ಲಿ ಗೆದ್ದ 190 ಕೋಟಿ ದುಡ್ಡನ್ನು ಬಟ್ಟೆ ವಾಶ್ ಮಾಡಿ ಬರುವಷ್ಟರಲ್ಲಿ ಕಳೆದುಕೊಂಡಿದ್ದಳು !

ಲಾಟರಿ ಎಂದರೆ ಕೆಲವರಿಗೆ ಒಂಥರಾ ಹುಚ್ಚು. ಹಲವು ಬಾರಿ ಜನರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಾರೆ ಹಾಗೂ ಅಲ್ಲೊಬ್ಬರು ಇಲ್ಲೊಬ್ಬರು ಗೆಲುವನ್ನು ಕೂಡ ಸಾಧಿಸುತ್ತಾರೆ. ಹಾಗೆಯೇ ಇಲ್ಲಿ‌ ಒಬ್ಬಾಕೆ ಬಲು ಆಸೆಯಿಂದ ಲಾಟರಿ ಟಿಕೆಟ್
ಖರೀದಿಸಿ ಶ್ರೀಮಂತಳಾಗುವ ಕನಸು ಕಂಡಿದ್ದಳು. ಎಂದಿನಂತೆ ಈ ಸಲವೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಆಕೆ ತಾನು ಖರೀದಿಸಿದ ಲಾಟರಿ ಟಿಕೆಟ್ ಅನ್ನು ಪ್ಯಾಂಟ್ ಕಿಸೆಯಲ್ಲಿಟ್ಟು ಮನೆಗೆ ಬಂದಿದ್ದಳು. ಅದೃಷ್ಟವೆಂಬಂತೆ, ಆಕೆ ಕೊಂಡ ಇದೇ ಲಾಟರಿ ಟಿಕೆಟ್‌ಗೆ 190 ಕೋಟಿ ರೂ ಬಂಪರ್ ಬಹುಮಾನ ಒಲಿದು ಬಂದಿತ್ತು…!

ಆದರೆ, ಅದನ್ನು ಪಡೆಯುವ ಭಾಗ್ಯ ಆ ಮಹಿಳೆಗೆ ದಕ್ಕಲಿಲ್ಲ. ಕಾರಣ, ಆಕೆಯ ಬಳಿ ಆ ಟಿಕೆಟ್ಟೆ ಇರಲಿಲ್ಲ ! ಆಕೆ ಪ್ಯಾಂಟ್ ಕಿಸೆಯಲ್ಲಿಟ್ಟಿದ್ದ ಟಿಕೆಟ್ ಬಟ್ಟೆ ಒಗೆಯುವಾಗ ಸೋಪಿನ ನೊರೆಯ ಮೇಲಿನ ಗುಳ್ಳೆ ಕ್ಷಣದಲ್ಲಿ ಒಡೆದು ಹೋದಂತೆ ಸಂಪೂರ್ಣ ನಾಶವಾಗಿ ಹೋಗಿತ್ತು.

190 ಕೋಟಿ ಲಾಟರಿ ಗೆದ್ದ ಮಹಿಳೆಯ ನೋವಿನ ಕತೆ ಇದು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಮಾತು ಈಕೆಗೆ ಅಕ್ಷರಶಃ ಅನ್ವಯವಾಗುತ್ತದೆ. ಯಾಕೆಂದರೆ, ಬರೋಬ್ಬರಿ 190 ಕೋಟಿ ರೂ ಗೆಲ್ಲುವ ಅವಕಾಶ ಇಲ್ಲಿ ಸಂಪೂರ್ಣವಾಗಿ ಮಾಸಿ ಹೋಗಿದೆ.

ಈ ಲಾಟರಿ ಟಿಕೆಟ್‌ನ್ನು ಒಂದುಆಕೆ ಒಂದು ಕನ್ವಿನಿಯನ್ಸ್ ಶಾಪ್‌ನಲ್ಲಿ ಖರೀದಿ ಮಾಡಿದ್ದಳು. ಖರೀದಿ ಮಾಡಿದ 15 ದಿನಗಳ ಬಳಿಕ ಈ ಲಾಟರಿ ಟಿಕೆಟ್ ಡ್ರಾ ಆಗಲಿತ್ತು. ಅಂದು ಈ ಲಾಟರಿ ಟಿಕೆಟ್‌ನ ಡ್ರಾ ನಡೆದಿದ್ದರೂ ಗೆದ್ದವರು ಯಾರೂ ಬಂದಿರಲಿಲ್ಲ. ನಂತರ ಹಣ ಪಡೆಯಲು ಕೊನೆಯ ದಿನಾಂಕ ನಿಗದಿ ಪಡಿಸಲಾಗಿದ್ದ ದಿನಕ್ಕಿಂತ ಒಂದು ದಿನ ಮುಂಚೆ ಓರ್ವ ಮಹಿಳೆ ಮುಂದೆ ಬಂದಿದ್ದು, ತಾನೇ ಆ ಟಿಕೆಟ್ ವಿಜೇತೆ ಎಂದಿದ್ದಾಳೆ. ‘ ಆ ಗೆದ್ದ ಲಾಟರಿ ಟಿಕೆಟಿನ ಒಡತಿ ನಾನೇ. ಆದರೆ ನಾನು ಬಟ್ಟೆ ಒಗೆಯುವಾಗ ಕಿಸೆಯಲ್ಲಿದ್ದ ಲಾಟರಿ ಟಿಕೆಟ್ ಸಂಪೂರ್ಣ ಹಾಳಾಯ್ತು ‘ ಎಂದು ಹೇಳಿದ್ದಾಗಿ ಲಾಟರಿ ಟಿಕೆಟ್ ಮಾರಾಟ ಮಾಡಿದ್ದ ಅಂಗಡಿಯ ಉದ್ಯೋಗಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಆಕೆ ಆ ಅಂಗಡಿಯವರಿಗೆ ತೀರಾ ಪರಿಚಯಸ್ಥರಾಗಿದ್ದರು. ಬಳಿಕ ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಕಂಡಾಗಲೂ ಮಹಿಳೆ ಟಿಕೆಟ್ ಖರೀದಿಸುವ ದೃಶ್ಯ ಇತ್ತು. ಅದನ್ನು ಅಂಗಡಿಯವರು ಲಾಟರಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಆದರೆ, ಲಾಟರಿ ಟಿಕೆಟ್ ಟು ಇಲ್ಲದೆ ಮಹಿಳೆಗೆ ಹಣವನ್ನು ವರ್ಗಾಯಿಸಲಾಗುವುದಿಲ್ಲ ಎಂದು ಲಾಟರಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೇವಲ ಸಿಸಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಗಣಿಸಲಾಗದು ಎಂದು‌ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ, ಲಾಟರಿ ಗೆದ್ದವರ ಬಳಿ ತಮ್ಮ ಬಳಿ ಲಾಟರಿ ಇತ್ತು ಎಂಬುದಕ್ಕೆ ನಿಖರ ದಾಖಲೆ ಬೇಕಾಗುತ್ತದೆ. ಒಂದೊಮ್ಮೆ ಟಿಕೆಟ್ ಕಳೆದು ಹೋಗಿದ್ದರೂ ಅದರ ಹಿಂಭಾಗ ಮತ್ತು ಮುಂಭಾಗದ ಫೋಟೋ ಇರಬೇಕು ಎಂದಿದ್ದಾರೆ ಲಾಟರಿ ಅಧಿಕಾರಿಗಳು. ಇದೀಗ ಲಾಟರಿ ಸಂಸ್ಥೆಯ ಅಧಿಕಾರಿಗಳು ಇನ್ವೆಸ್ಟಿಗೇಶನ್ ಗೆ ಇಳಿದಿದ್ದಾರೆ. ಸದ್ಯಕ್ಕೆ 190 ಕೋಟಿ ದುಡ್ಡನ್ನು ಬಹುತೇಕ ಕಳೆದುಕೊಂಡು ಕೂತಿರುವ ಈ ಮಹಿಳೆ, ಮತ್ತೊಮ್ಮೆ ಅದೃಷ್ಟವಂತ ಆಗುತ್ತಾಳೆ ಎಂಬುದನ್ನು ಕಾದು ನೋಡಬೇಕಾಗಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಕ್ಯಾಲಿಫೋರ್ನಿಯಾದಲ್ಲಿ.

Leave A Reply

Your email address will not be published.