ವಿಚ್ಛೇದಿತೆ ಎರಡನೇ ಮದುವೆ ವಿವಾಹವಾಗಿದ್ದಕ್ಕೆ ಪಂಚಾಯತ್ ನೀಡಿದ್ದು ಎಂಜಲು ನೆಕ್ಕುವ ಹೀನ ಶಿಕ್ಷೆ !

ವಿಚ್ಛೇದಿತ ಮಹಿಳೆಯೊಬ್ಬಳು ಎರಡನೆಯ ವಿವಾಹವಾಗಿದ್ದನ್ನು ಖಂಡಿಸಿ ಆಕೆಗೆ ಎಂಜಲು ನೆಕ್ಕುವ ಶಿಕ್ಷೆ ನೀಡಿರುವ ಘನಘೋರ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.

ಈ ಮೊದಲು ಆಕೆಗೆ ಮದುವೆ ಆಗಿದ್ದು ಆಕೆ ಗಂಡನಿಂದ ವಿಚ್ಛೇದನ ಪಡೆದುಕೊಂಡಿದ್ದಳು. ನಂತರ ಈಗ ಮಹಿಳೆ ಇನ್ನೊಂದು ವಿವಾಹವಾಗಿದ್ದ ಹಿನ್ನೆಲೆಯಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರು ಈ ಅಮಾನವೀಯ ಶಿಕ್ಷೆ ಕೊಟ್ಟಿದ್ದಾರೆ. ಈ ಘಟನೆ ಕಳೆದ ತಿಂಗಳು ನಡೆದಿದ್ದು ಎನ್ನಲಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಜೋಗಿ ಎಂಬ ಸಮುದಾಯಕ್ಕೆ ಸೇರಿರುವ ಮಹಿಳೆ 2015 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದಳು. 2019 ರಲ್ಲಿ ಮತ್ತೊಂದು ವಿವಾಹವಾಗಿದ್ದಾರೆ. ಮದುವೆಯಾಗಿ ಎರಡು ವರ್ಷವಾಗುತ್ತ ಬಂದಿದ್ದು, ಇದೀಗ ಪಂಚಾಯತ್ ಸದಸ್ಯರು ಎರಡನೇ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ ಶಿಕ್ಷೆ ಕೊಡಿಸಲು ನಿರ್ಧರಿಸಿದ್ದಾರೆ.

ಅಂತೆಯೇ ಪಂಚಾಯತ್ ಸದಸ್ಯರು ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ನಂತರ ಅಲ್ಲಿ ತೆಗೆದುಕೊಂಡ ನಿರ್ಧಾರದಂತೆ ಮಹಿಳೆಯ ಕುಟುಂಬಸ್ಥರನ್ನು ಕರೆಸಿದ್ದಾರೆ. ಅಲ್ಲಿನ ನಿರ್ಧಾರದಂತೆ ಪಂಚಾಯತ್ ಸದಸ್ಯರು ಬಾಳೆ ಎಲೆ ಮೇಲೆ ಉಗುಳಬೇಕು. ಈ ಉಗುಳನ್ನು ಶಿಕ್ಷೆಯಾಗಿ ಮಹಿಳೆ ನೆಕ್ಕಬೇಕೆಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೇ ಮರು ವಿವಾಹವಾದುದಕ್ಕೆ 1 ಲಕ್ಷ ರೂಪಾಯಿ ದಂಡ ಕಟ್ಟುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಶಿಕ್ಷೆ ಪೂರ್ಣಗೊಂಡ ಬಳಿಕ ಮಹಿಳೆಯನ್ನು ಮರಳಿ ಸಮುದಾಯಕ್ಕೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ವಿಷಯವನ್ನು ಕುಟುಂಬಸ್ಥರು ಮಹಿಳೆಗೆ ತಿಳಿಸಿದ್ದಾರೆ. ಇದರಿಂದ ಆಘಾತಗೊಂಡ ಮಹಿಳೆ ಆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ನಂತರ ಘಟನೆ ಬೆಳಕಿಗೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪಂಚಾಯತ್ ಸದಸ್ಯರ ವಿರುದ್ಧ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2016, ಮಹಾರಾಷ್ಟ್ರ ಜನರ ಸಂರಕ್ಷಣೆ ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.