ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ ಸಹಾಯದ ನೆಪದಲ್ಲಿನ ಪೋಸ್ಟರ್ ಪ್ರಚಾರ..ಬಲಗೈಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗದಿರಲಿ

ಇಡೀ ರಾಷ್ಟ್ರವೇ ಕೊರೋನ ಎಂಬ ಮಹಾಮಾರಿಯ ವಿರುದ್ಧ ಹಗಲು ರಾತ್ರಿ ಎನ್ನದೆ ಹೋರಾಡುತ್ತಿದೆ.ಈ ನಡುವೆ ಜಿಲ್ಲೆಯಲ್ಲಿ ಸಹಾಯದ ನೆಪದಲ್ಲಿ ಹೆಸರು ಗಳಿಸುವ ಕೆಲ ಗುಂಪುಗಳು ಕಾರ್ಯಾಚರಿಸುತ್ತಿದೆ. ಕಷ್ಟದಲ್ಲಿದ್ದ ಕೆಲ ಕುಟುಂಬಗಳಿಗೆ 10 ಕೆಜಿ ಅಥವಾ 20 ಕೆಜಿ ಅಕ್ಕಿ, ಸ್ವಲ್ಪ ಇತರ ಅಗತ್ಯ ಸಾಮಗ್ರಿಗಳನ್ನು ನೀಡಿ, ಆ ಕುಟುಂಬದೊಂದಿಗೆ ಒಂದು ಫೋಟೋ ಕ್ಲಿಕ್ಕಿಸಿಕೊಂಡು, ಆ ನಂತರ ಅದನ್ನು ಪೋಸ್ಟರ್ ಮಾಡಿ ಎಲ್ಲಾ ಗ್ರೂಪ್ ಗಳಿಗೆ ಶೇರ್ ಮಾಡಿ ಹೆಸರುಗಳಿಸುತ್ತಿದೆ.


ಈ ಮೊದಲು ಹೆಣ ಸುಡುವುದರಲ್ಲಿ ಸ್ಪರ್ಧೆ ಮಾಡಿ, ಕಷ್ಟದ ಸಮಯದಲ್ಲಿ ಧರ್ಮ ಬೇಧ ಮಾಡಿದ ಎರಡೂ ಧರ್ಮದ ಸಂಘಟನೆಗಳು ಇಂದು ಒಂದು ಹೆಜ್ಜೆ ಮುಂದಿಟ್ಟು ಈ ಕಾರ್ಯಕ್ಕೆ ಇಳಿದಿದೆ. ಒಂದು ರೀತಿಯಲ್ಲಿ ಬಡವರ ಕಣ್ಣೊರೆಸುವ ಕಾರ್ಯ ಎಂದುಕೊಂಡರೆ ನೆಟ್ಟಿಗರ ಪ್ರಕಾರ ಇದೊಂದು ಹೆಸರುಗಳಿಸುವ ಕಾರ್ಯ.


ಜಿಲ್ಲೆಯ ಅನೇಕ ಕಡೆಗಳಲ್ಲಿ ನಾ ಮುಂದು ತಾ ಮುಂದು ಎಂಬಂತೆ ಸಹಾಯದ ನೆಪವೊಡ್ಡಿ ಸ್ಪರ್ಧೆಗಳು ಏರ್ಪಟ್ಟಿದೆ. ಕಷ್ಟದ ಸಮಯದಲ್ಲಿ ಈ ರೀತಿಯ ಸ್ಪರ್ಧೆ, ತೋರ್ಪಡಿಸಿಕೊಳ್ಳುವಿಕೆ ಬೇಕೇ ಎಂಬುವುದು ಕೆಲವರ ಪ್ರಶ್ನೆಯಾದರೆ, ಎಲ್ಲಾ ವಿಚಾರದಲ್ಲಿ ಸಹಾಯಕವಾಗಿರುವ ಸಂಘಟನೆಗಳು ಕೊರೋನ ಸಂದರ್ಭದಲ್ಲಿಯೂ ಸಹಾಯಕ್ಕೆ ನಿಂತಿದೆ ಎಂಬುವುದು ಖುಷಿಯ ವಿಚಾರವು ಹೌದು.

ಆದರೆ!ಈ ರೀತಿಯ ಪೋಸ್ಟರ್ ಬಳಸುವುದು, ಕೆಲ ಲೈಕ್ಸ್ ಪಡೆದುಕೊಳ್ಳುವುದರಲ್ಲಿ ಯಾವ ಲಾಭವಿದೆ ಎಂಬುವುದು ಅರ್ಥವಾಗದೆ,ಉತ್ತರ ಸಿಗದ ಪ್ರಶ್ನೆಯಾಗಿದೆ.ಕೆಲ ಕುಟುಂಬಗಳು ತೀರಾ ಬಡತನದಲ್ಲಿರುವುದು ಎಲ್ಲರ ಗಮನಕ್ಕೂ ಬಂದಿದೆ. ಅನೇಕರು ಸಹಾಯಕ್ಕೂ ನಿಂತಿದ್ದಾರೆ.ಆದರೆ ಅವರ್ಯಾರೂ ತಮ್ಮನ್ನು ತಾವು ಸಮಾಜ ಸೇವಕರು ಎಂದು ಎಲ್ಲಿಯೂ ಈ ಮೊದಲು ತೋರ್ಪಡಿಸಿಕೊಳ್ಳಲು ಮುಂದೆ ಬರಲಿಲ್ಲ. ಅದು ಅವರ ಘನತೆ, ಗೌರವವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ ಅನೇಕ ಬಡವರ ಪಾಲಿನ ಆಶಾಕಿರಣವಾಗಿದ್ದಾರೆ.

ಆದರೆ ಕೆಲ ಯುವಕರ ಗುಂಪು ಇಂದು ಸಹಾಯ ಎಂಬ ನೆಪದಲ್ಲಿ ಗುಂಪುಗಳಲ್ಲೇ, ಗುಂಪುಗಳ ನಡುವೆ ಸ್ಪರ್ಧೆಗಳು ಏರ್ಪಟ್ಟು,ದಿನದಲ್ಲಿ ಒಂದೆರಡು ಮನೆಗಳಿಗೆ ತೆರಳಿ ಅಗತ್ಯ ಸಾಮಗ್ರಿಗಳನ್ನು ನೀಡಿ,ಒಂದು ಫೋಟೋ ಕ್ಲಿಕ್ಕಿಸಿ ಅಷ್ಟು ಕೊಟ್ಟೆವು, ಇಷ್ಟು ಕೊಟ್ಟೆವು ಎಂದು ಬೀಗುವುದರಲ್ಲಿ ನಿರತರಾಗಿದ್ದಾರೆ.


ಕಷ್ಟಕಾಲದಲ್ಲಿಯೂ ಈ ರೀತಿಯ ಪ್ರಚಾರ ಬೇಕೇ? ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ನೀವಿಲ್ಲದಿದ್ದರೆ ಇನ್ನೊಬ್ಬ.ರಾಷ್ಟ್ರವೇ ಮಹಾಮಾರಿಯ ವಿರುದ್ಧ ಹೋರಾಡುತ್ತಿದೆ, ಪ್ರಚಾರಕ್ಕಾಗಿ ಫೋಟೋ ಕ್ಲಿಕ್ಕಿಸಿಕೊಂಡು ಪೋಸ್ಟರ್ ಮಾಡಿ ಮೆರೆಯಲು ಮುಂದೊಂದು ದಿನ ನಿಮ್ಮ ಬುಡಕ್ಕೂ ಬರಬಹುದಲ್ಲವೇ?. ಬಲಗೈಯ್ಯಲ್ಲಿ ಮಾಡಿದ ಸಹಾಯ ಎಡಗೈಗೆ ಗೊತ್ತಾಗದಿರಲಿ.

Leave A Reply

Your email address will not be published.