ತೌಕ್ತೆ ಚಂಡಮಾರುತದ ಆರ್ಭಟಕ್ಕೆ ಕುಸಿದು ಸಮುದ್ರ ಪಾಲಾದ ಎರಡಂತಸ್ತಿನ ಮನೆ

ಈ ವರ್ಷದ ಮೊದಲ ಚಂಡಮಾರುತ ದೇಶದ ಕರಾವಳಿ ಜಿಲ್ಲೆಗಳಿಗೆ ಈಗಾಗಲೇ ಅಪ್ಪಳಿಸಿದ್ದು “ತೌಕ್ತೆ” (Tauktae) ಚಂಡಮಾರುತದ ಎಫೆಕ್ಟ್ ನಿಂದ ಈಗಾಗಲೇ ಮಂಗಳೂರು, ಉಡುಪಿ ಕರಾವಳಿಯಾದ್ಯಂತ ಜೋರು ಗಾಳಿ- ಬಿರುಮಳೆಯಾಗುತ್ತಿದೆ.

ಕಡಲ ಅಬ್ಬರ ಹೇಳತೀರದು. ದ.ಕ. ಸಮೀಪದ ಕಾಸರಗೋಡಿನಲ್ಲಿಯೂ ಗಾಳಿ- ಮಳೆಯ ಅಬ್ಬರ ಮುಂದುವರಿದಿದೆ.
ಅರಬ್ಬಿ ಕಡಲು ಅಡ್ಡಾದಿಡ್ಡಿಯಾಗಿ ಕುಲುಕುತ್ತಿದ್ದು ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಹೀಗೆ ಅಲೆಗಳು ಪ್ರತಿಬಾರಿ ನೆಲಕ್ಕಪ್ಪಳಿಸುವಾಗ, ತನ್ನೊಂದಿಗೆ ಒಂದಷ್ಟು ಮಣ್ಣನ್ನು ಸಡಿಲಮಾಡಿಕೊಂಡು ಒಯ್ಯುತ್ತಿದೆ.   

ಇಂದು ಕಾಸರಗೋಡು – ಉಪ್ಪಳದ ಮುಸೋಡಿ ಬೀಚ್ ಸನಿಹದಲ್ಲಿ, ಹೀಗೆ ಅಲೆಗಳು ಮನೆಯ ಬುಡಕ್ಕೆ ಬಡಿದು ಬಡಿದು ಮಣ್ಣು ಸಡಿಲಗೊಂಡು ದೊಡ್ಡ ಎರಡಂತಸ್ತಿನ ಮನೆಯೊಂದು ಕುಸಿದು ಸಮುದ್ರಪಾಲಾಗಿದೆ. ಈ ಪರಿಸರದಲ್ಲಿ ಅಲೆಗಳು ಮತ್ತಷ್ಟು ಮುಂದಕ್ಕೊತ್ತಿ ಬರುತ್ತಿರುವುದು, ಸಮುದ್ರ ತೀರದ ಮನೆ ನಿವಾಸಿಗಳಿಗೆ ಆತಂಕವನ್ನು ಹೆಚ್ಚು ಮಾಡಿದೆ.

ಸಸಿಹಿತ್ತುವಿನ ಬೀಚ್ ನ ಮುಕ್ಕಾಲು ಭಾಗವನ್ನು ಕಡಲು ಆವರಿಸಿ ಕೊಂಡಿದೆ. ಅಂಗಡಿ ಹಾಗೂ ಜೀವರಕ್ಷಕದಳದ ವಿಶ್ರಾಂತಿ ಕೊಠಡಿ ಸಮುದ್ರದ ಅಲೆಗಳ ರಭಸಕ್ಕೆ ಕುಸಿದು ಬಿದ್ದಿದೆ.

ಬೀಚ್ ನ ರಸ್ತೆಗೆ ನೇರವಾಗಿ ಅಲೆ ಅಪ್ಪಳಿಸುತ್ತಿದ್ದು, ಗಾಳಿ ಮರಗಳು ಧರೆಗೆ ಉರುಳಿದೆ. ವಿದ್ಯುತ್ ಕಂಬಗಳು ಅಪಾಯದ ಅಂಚಿನಲ್ಲಿದೆ, ಪ್ರವಾಸಿಗರು ಕುಳಿತುಕೊಳ್ಳುವ ಬೆಂಚುಗಳು ಮತ್ತಿತರ ಸವಲತ್ತುಗಳು ಸಮುದ್ರಕ್ಕೆ ಮಡಿಲಿಗೆ ಸೇರಿದೆ. ಸಾರ್ವಜನಿಕ ಶೌಚಾಲಯ ಕಟ್ಟಡ ಮಾತ್ರ ಉಳಿದಿದೆ. ಅಪಾಯಕಾರಿ ಬೀಚ್ ನ ಪ್ರದೇಶಕ್ಕೆ ಸಾರ್ವಜನಿಕರು ಪ್ರವೇಶಿಸಬಾರದೆಂದು ಗೇಟ್ ನ್ನು ಮುಚ್ಚಲಾಗಿದೆ.

Leave A Reply

Your email address will not be published.