ಮೊದಲು ಬಿಜೆಪಿಯ ಲಸಿಕೆ ಎಂದು ಆಕ್ಷೇಪಿಸಿದರು ಈಗ ಲಸಿಕೆ ಸಿಗುತ್ತಿಲ್ಲ ಎಂದು ಕಣ್ಣೀರು – ನಳಿನ್‍ ಕುಮಾರ್

ದೇಶದಲ್ಲಿ ಲಸಿಕೆ ಬಗ್ಗೆ ಅದು ಬಿಜೆಪಿ ಲಸಿಕೆ ಎಂದು ಆಕ್ಷೇಪಿಸಿವರು ಈಗ ಲಸಿಕೆ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ಲಸಿಕೆ ಬಂದಾಗ ಜನರ ದಾರಿ ತಪ್ಪಿಸಿದವರು ಇವತ್ತು ಕೋವಿಶೀಲ್ಡ್, ಕೋವ್ಯಾಕ್ಸಿನ್ ಇಲ್ಲ ಎಂದು ಟೀಕಿಸುತ್ತಿದ್ದಾರೆ. ಜನರ ದಾರಿ ತಪ್ಪಿಸಿದ ಪಕ್ಷಗಳೇ ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಸಾವಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‍ ಕುಮಾರ್ ಕಟೀಲು ಅವರು ಆರೋಪಿಸಿದರು.

ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಕೋಟಿ ಕೋವಿಶೀಲ್ಡ್, ಒಂದು ಕೋಟಿ ಕೋವ್ಯಾಕ್ಸಿನ್ ಲಸಿಕೆ ಖರೀದಿಗೆ ರಾಜ್ಯ ಸರಕಾರ ಈಗಾಗಲೇ ಆದೇಶ ನೀಡಿದೆ.

ಕೆಲವೇ ದಿನಗಳಲ್ಲಿ ಅದು ಬರಲಿದೆ. ಮುಖ್ಯಮಂತ್ರಿ ಮತ್ತು ಸಚಿವರ ತಂಡವು ಒಂದಾಗಿ ಕೆಲಸ ಮಾಡುತ್ತಿದೆ. ಲಾಕ್‍ಡೌನ್ ಬಳಿಕ ಕೋವಿಡ್ ನಿಯಂತ್ರಣಕ್ಕೆ ಬರುತ್ತಿದೆ ಎಂದು ತಿಳಿಸಿದರು.

ಕೊರೋನ ನಿರ್ವಹಣೆಯಲ್ಲಿ ವಿರೋಧ ಪಕ್ಷದವರು ರಾಜಕೀಯ ಮಾಡಬಾರದು. ಎಲ್ಲರೂ ಒಂದಾಗಿ ಕೆಲಸ ಕಾರ್ಯಗಳನ್ನು ಮಾಡಬೇಕಿದೆ. ಜನರಲ್ಲಿ ವಿಶ್ವಾಸ, ಆತ್ಮವಿಶ್ವಾಸ ತುಂಬುವ ಕೆಲಸ ಎಲ್ಲರ ಜವಾಬ್ದಾರಿ. ಕೋವಿಡ್ ಒಂದು ಮತ್ತು ಎರಡನೇ ಅಲೆಯ ಭೀಕರತೆಯ ಕಲ್ಪನೆಯೇ ಇರಲಿಲ್ಲ. ಕೋವಿಡ್‍ಗೆ ಬಿಜೆಪಿಯವರು ಅಥವಾ ಕಾಂಗ್ರೆಸ್‍ನವರು ಎಂಬ ಭೇದಭಾವ ಇಲ್ಲ. ಅದನ್ನು ಎಲ್ಲಾ ಜನಪ್ರತಿನಿಧಿಗಳೂ ಅರ್ಥ ಮಾಡಿಕೊಂಡು ಜನರ ಪ್ರಾಣರಕ್ಷಣೆಗೆ ಸಹಕರಿಸಬೇಕು ಎಂದು ತಿಳಿಸಿದರು.

2020ರಲ್ಲಿ ರಾಜ್ಯದಲ್ಲಿ 1,970 ಆಕ್ಸಿಜನ್ ಬೆಡ್ ಇತ್ತು. ಅದನ್ನು ಈಗ 24,000ಕ್ಕೆ ಏರಿದೆ. ಆಗ 444 ಐಸಿಯು ಇತ್ತು. ಈಗ 1,135 ಇದೆ. ರಾಜ್ಯದ ಖಾಸಗಿ ಕಾಲೇಜುಗಳಲ್ಲಿ ಆಕ್ಸಿಜನ್ ಘಟಕ ತೆರೆಯಲು ಶೇ.70 ಸಬ್ಸಿಡಿಯನ್ನು ರಾಜ್ಯ ಸರಕಾರವು ಕೊಡುತ್ತಿದೆ. ಆಕ್ಸಿಜನ್ ಹಂಚಿಕೆಯನ್ನೂ ಕೇಂದ್ರ ಸರಕಾರ ಹೆಚ್ಚಿಸಿದೆ. ಅಗತ್ಯ ಆಕ್ಸಿಜನ್ ಅನ್ನು ಖರೀದಿಸಲಾಗುತ್ತಿದೆ. ರೆಮ್‍ಡೆಸಿವಿರ್ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಒಂದನೇ ಅಲೆ ಪ್ರವೇಶ ಆದಾಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ,ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ “ಸೇವಾ ಹೀ ಸಂಘಟನ್” ಅಡಿ ಪಕ್ಷವು ಕಾರ್ಯ ನಿರ್ವಹಿಸಿತ್ತು. 1.68 ಕೋಟಿ ಜನರಿಗೆ ಆಹಾರವನ್ನು 60 ಲಕ್ಷ ಕುಟುಂಬಗಳಿಗೆ ಆಹಾರ ಪೊಟ್ಟಣ, ವೈದ್ಯಕೀಯ ಕಿಟ್ ಒದಗಿಸಲಾಗಿತ್ತು. ಈ ಬಾರಿಯೂ ಎರಡನೇ ಅಲೆಯ ಸಂದರ್ಭದಲ್ಲೂ ಪಕ್ಷವು ಸೇವಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರ್ ರೂಂ ತೆರೆಯಲಾಗಿದೆ. ಇಲ್ಲಿಗೆ ಎರಡು ಸಾವಿರ ಕರೆಗಳು ಬಂದಿವೆ. 100 ಜನರಿಗೆ ಆಂಬುಲೆನ್ಸ್ ಸೇವೆ ನೀಡಿದ್ದು, 70 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 34 ಜನರ ಶವಸಂಸ್ಕಾರ ಮಾಡಲಾಗಿದೆ ಎಂದು ಹೇಳಿದರು.

ಮೊದಲನೇ ಅಲೆ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿಯನ್ನು ನನ್ನ ಅನುದಾನದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕೊಟ್ಟಿದ್ದೇನೆ. ಈ ವರ್ಷ ಎರಡೂವರೆ ಕೋಟಿ ಅನುದಾನ ಬಂದಿದ್ದು, ಅದನ್ನು ಜಿಲ್ಲಾಡಳಿತಕ್ಕೆ ಕೊಟ್ಡಿದ್ದೇನೆ. ಇದೇ ಮಾದರಿಯಲ್ಲಿ ಎಲ್ಲಾ ಬಿಜೆಪಿ ಸಂಸದರೂ ತಮ್ಮ ಅನುದಾನವನ್ನು ಕೋವಿಡ್‍ಗೇ ಬಳಸಲು ತಿಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ 100 ವೆಂಟಿಲೇಟರ್ ಕೊಡಲು ಮುಖ್ಯಮಂತ್ರಿಗಳ ಭೇಟಿ ವೇಳೆ ಕೇಳಿದ್ದೆ. ಕೊಡುವುದಾಗಿ ತಿಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ 40 ವೆಂಟಿಲೇಟರ್ ನೀಡಿದ್ದಾರೆ ಎಂದರು.

ಮೂರು ಏಜೆನ್ಸಿಗಳಿಂದ ಬಳ್ಳಾರಿ, ಪಾಲಕ್ಕಾಡ್‍ನಿಂದ ಆಕ್ಸಿಜನ್ ಬರಬೇಕು. ಸ್ಟಾಕ್, ಸಾರಿಗೆ ನಿರ್ವಹಣೆಗೆ ಎಂಆರ್‍ಪಿಎಲ್‍ನಿಂದ ಮಂಗಳೂರಿನ ವೆನ್ಲಾಕ್‍ಗೆ ಸರಬರಾಜು ಮಾಡಲಾಗುತ್ತಿದೆ. ಇಎಸ್‍ಐ ಮತ್ತು ಬಂಟ್ವಾಳ ತಾಲೂಕಿಗೆ ಎಂಸಿಎಫ್ ಮೂಲಕ ಆಮ್ಲಜನಕ ನೀಡಲಾಗುತ್ತಿದೆ. ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಗೇಲ್ ಇಂಡಿಯಾದಿಂದ, ಉಪ್ಪಿನಂಗಡಿ ಮತ್ತು ಮೂಡಬಿದಿರೆಗೆ ಕುದುರೆಮುಖ ಕಂಪೆನಿ ಮೂಲಕ ಸರಬರಾಜು ನಡೆದಿದೆ. ಉಳ್ಳಾಲದಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲು ಇನ್‍ಫೋಸಿಸ್ ಮುಂದೆ ಬಂದಿದೆ ಎಂದು ವಿವರಿಸಿದರು.

ಮಂಗಳೂರಿನ ವೆನ್ಲಾಕ್‍ ನಲ್ಲಿ 6 ಸಾವಿರ ಲೀಟರ್ ನ ಎರಡು ಟ್ಯಾಂಕ್‍ಗಳು ದಾಸ್ತಾನಿವೆ. ಕ್ರೆಡೈ, ಬಿಎಎಎಸ್‍ಎಫ್, ಎನ್‍ಎಂಪಿಟಿಗಳೂ ಸಹಾಯಹಸ್ತ ಚಾಚಿವೆ. ಎಸ್‍ಇಜೆಡ್ ಆಂಬುಲೆನ್ಸ್ ಗಳ ಬಾಡಿಗೆ ಭರಿಸಲು ಮುಂದಾಗಿದೆ ಎಂದು ತಿಳಿಸಿದರು. ಸಚಿವ ಶ್ರೀ ಮುರುಗೇಶ್ ನಿರಾಣಿ ಅವರೂ ಈ ವಿಚಾರದಲ್ಲಿ ನೆರವಾಗಿದ್ದಾರೆ. ಇನ್ನು ಮುಂದೆ ಆಮ್ಲಜನಕ ಸರಬರಾಜು ಮತ್ತು ವಿತರಣೆಯ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ಕೆನರಾ ಬ್ಯಾಂಕ್ ಕೊಟ್ಟಿರುವ 25 ಲಕ್ಷ ದೇಣಿಗೆಯನ್ನು ಉಪ್ಪಿನಂಗಡಿಗೆ ನೀಡಲಾಗಿದೆ. ಮೂಡಬಿದಿರೆ, ಬೆಳ್ತಂಗಡಿಗೆ ತಲಾ 50 ಆಕ್ಸಿಜನ್ ಬೆಡ್‍ಗಳನ್ನು ಕುದುರೆಮುಖ ಕಂಪೆನಿಯು ನೀಡುತ್ತಿದೆ ಎಂದರು.

ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕ ವೇದವ್ಯಾಸ ಕಾಮತ್, ಪಕ್ಷದ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.