Ad Widget

‘ ಪೋಸ್ಟರ್ ಶವಸಂಸ್ಕಾರ ‘ ಎಂಬ ಪಿಡುಗು | ಹೆಣ ಸುಡಲು ಹಿಂದೂ ಮುಸ್ಲಿಂ ಸಂಘಟನೆಗಳಲ್ಲಿ ಪೈಪೋಟಿ !

ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ಬಹುಮುಖ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ಕೊರೋನಾ ಸಾವಿನ ರಾಜಕೀಯ ಮೇರೆ ಮೀರುತ್ತಿದೆ.

ಮುಸ್ಲಿಂ ಮತ್ತು ಹಿಂದೂ ಧರ್ಮಾಧಾರಿತ ಸಂಘಟನೆಗಳಲ್ಲಿ ರೋಗದಿಂದ ಸಾವಿಗೀಡಾದವರ ಹೆಣಗಳನ್ನು ಸುಡುವುದರಲ್ಲಿ ಪೈಪೋಟಿ ಏರ್ಪಟ್ಟಿದೆ. ನಾ ಮೇಲು ತಾ ಮೇಲು ಎಂಬ ಜಿದ್ದಾ-ಜಿದ್ದು ಪ್ರಾರಂಭವಾಗಿದೆ.

‘ಹಿಂದೂ ಧರ್ಮದವರ ಶವವನ್ನು ಶವಸಂಸ್ಕಾರ ಮಾಡಲು ಅವರ ಕುಟುಂಬಸ್ಥರು ಮುಂದೆ ಬರಲಿಲ್ಲ. ಹೀಗಾಗಿ ಮುಸ್ಲಿಂ ಸಂಘಟನೆಗಳು ಮುಂದೆ ಬಂದು ಶವಸಂಸ್ಕಾರ ಮಾಡಿದವು’ ಎಂಬ ಸಮ್ಮರಿ ಉಳ್ಳ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಅಲ್ಲಿಂದ ಮುಂದೆ ಸ್ಪರ್ಧೆ ಏರ್ಪಟ್ಟಿತು ನೋಡಿ. ಮುಸ್ಲಿಂ ಮತ್ತು ಹಿಂದೂ ಸಂಘಟನೆಗಳು ಪರಸ್ಪರ ಸ್ಪರ್ಧೆಗೆ ಇಳಿದವು. ಸೋಂಕಿನಿಂದ ಮೃತಪಟ್ಟ ರೋಗಿಗಳ ಶವಸಂಸ್ಕಾರಕ್ಕೆ ಇಳಿದರು. ಶವ ಸಂಸ್ಕಾರವನ್ನು ಸಾರ್ವಜನಿಕವಾಗಿ ಈ ಹಿಂದೆಯೂ ಮಾಡುತ್ತಲೇ ಬಂದಿದ್ದರು. ಆದರೆ ಈ ರೀತಿಯಾಗಿ ಪ್ರತಿಷ್ಠೆಯ ವಿಷಯವಾಗಿ ಅದು ಇರಲಿಲ್ಲ.

Ad Widget Ad Widget Ad Widget

ಖಂಡಿತವಾಗಿಯೂ ಸಾರ್ವಜನಿಕರು ಬಂದು ಶವಸಂಸ್ಕಾರಕ್ಕೆ ಸಹಾಯ ಮಾಡುವುದು, ನೆರವೇರಿಸುವುದು ಒಳ್ಳೆಯ ಬೆಳವಣಿಗೆ.
ಸೋಂಕು ಹರಡುತ್ತದೆ, ಇದು ಮಾರಣಾಂತಿಕ ಕಾಯಿಲೆ ಎಂದು ಗೊತ್ತಿದ್ದರೂ, ಕಾಯಿಲೆಯನ್ನು ತಕ್ಕಮಟ್ಟಿಗೆ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಎಂಬುದು ನಿಜವಾಗಿದ್ದರೂ ಕೂಡ, ಒಂದು ರೀತಿಯಲ್ಲಿ ಶವಸಂಸ್ಕಾರ ಮಾಡುವುದರಲ್ಲಿ ತಕ್ಕ ಮಟ್ಟಿಗಿನ ಆರೋಗ್ಯ ಸಂಬಂಧಿ ರಿಸ್ಕ್ ಇದ್ದೇ ಇದೆ. ಈ ಕ್ಯಾಲ್ಕುಲೇಟೆಡ್ ರಿಸ್ಕನ್ನು ತೆಗೆದುಕೊಂಡು ಹಿಂದೂ ಸಂಘಟನೆಗಳು ಮತ್ತು ಮುಸ್ಲಿಂ ತಂಡಗಳು ಸಮಾಜಮುಖಿಯಾಗಿ ಕೆಲಸ ಮಾಡುತ್ತಿವೆ. ಆ ಕಾರಣಕ್ಕಾಗಿ ಆ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಸಲ್ಲಿಸಲೇಬೇಕು.

ಅದು ಸತ್ತು ಹೋದ ಜೀವ. ಜೀವದ ಹಿಂದೆ ಒಂದು ಕುಟುಂಬವಿದೆ. ಆ ಕುಟುಂಬವನ್ನು ನಂಬಿ ಆ ಜೀವವಿತ್ತು ಅಥವಾ ಆ ಜೀವವನ್ನು ಆಧರಿಸಿ ಇಡೀ ಕುಟುಂಬ ಬದುಕಿತ್ತು. ಇದು ಒಂದು ಭಾವನಾತ್ಮಕ ವಿಷಯ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ, ನಾವಿವತ್ತು 10 ಹೆಣಗಳು ಸಂಸ್ಕಾರ ಮಾಡಿದೆವು, ನಾವು 20 ಹೆಣ ಸುಟ್ಟೆವು, ರಾತ್ರಿಯಿಡೀ ಮಣ್ಣು ಅಗೆದೆವು, ಜಡಿಮಳೆಗೂ ದುಡಿದೆವು ಎಂಬಿಇತ್ಯಾದಿ ಸ್ಪರ್ಧೆಗೆ ಇಳಿದು, ಫೋಟೋ ವಿಡಿಯೋ ಎಡಿಟ್ ಮಾಡಿ, ಪೋಸ್ಟರ್ ತಯಾರಿಸಿ, ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು, ಆನಂತರ ಅದನ್ನು ಸ್ಟೇಟಸ್ ಹಾಕಿಕೊಂಡು ಬೀಗುವ ಅಗತ್ಯವಾದರೂ ಏನು….?

ಇದು ಕೋವಿಡ್ ರೋಗದಿಂದ ಮೃತಪಟ್ಟ ರೋಗಿಯ ವಿಚಾರ. ಸತ್ತುಹೋದ ಹೆಣವನ್ನು ಸಂಸ್ಕಾರ ಮಾಡುವ ವಿಚಾರ. ಮುಸ್ಲಿಂ ಧರ್ಮದಂತೆ ಹೆಣವನ್ನು ಹೂತು ಹಾಕಿದರೂ ಅದು ಗುಂಡಿಯ ಆಳದಲ್ಲಿ ಕೊಳೆತುಹೋಗುತ್ತದೆ ಮತ್ತು ದುರ್ನಾತ ಹೊಡೆಯಲು ಆರಂಭವಾಗುತ್ತದೆ. ಹಿಂದೂ ಸಂಸ್ಕಾರದಂತೆ ಹೆಣವನ್ನು ಸುಟ್ಟರೂ ಸುಟ್ಟ ವಾಸನೆ ಆವರಿಸಿಕೊಳ್ಳುತ್ತದೆ. ಹೂತಾಗ ಕೊಳೆತು ವಾಸನೆ ಬರುವುದು ಮತ್ತು ಸುಟ್ಟಾಗ ಸುಟ್ಟ ವಾಸನೆ ಬರುವುದು ಅದರ ಗುಣ. ಆದರೆ ಶವಸಂಸ್ಕಾರ ವಾಸನೆಯೊಂದಿಗೆ ಧರ್ಮ ರಾಜಕಾರಣದ ವಾಸನೆಯನ್ನು ಸಮಾಜಕ್ಕೆ ಬಿಡುವುದೇಕೆ…? ಇಂತಹ ಕೆಟ್ಟ ವಾಸನೆಯನ್ನು ನಮ್ಮ ಮೂಗಿಗೆ ಮೆತ್ತಿಕೊಳ್ಳುವುದು ಯಾವ ಪುರುಷಾರ್ಥಕ್ಕೆ…..?

ಅಷ್ಟಕ್ಕೂ ನಾವೆಲ್ಲರೂ ಈ ಸಮಾಜದ ಒಂದು ಭಾಗ. ನಾವೇನು ದೊಡ್ಡ ಮಹತ್ಕಾರ್ಯದ ಮಾನವೀಯತೆಯ ಕೆಲಸ ಮಾಡುತ್ತಿದ್ದೇವೆ ಎಂದು ದೊಡ್ಡದಾಗಿ ಬೀಗ ಬೇಕಿಲ್ಲ. ನಾವು ಶವಸಂಸ್ಕಾರ ಮಾಡದೆ ಹೋದರೆ ಇನ್ನೊಬ್ಬ ಬಂದು ಮಾಡುತ್ತಾನೆ. ಸತ್ತ ದೇಹವನ್ನು ಮನೆಯ ಮುಂದೆ ತುಂಬಾ ಹೊತ್ತು/ದಿನ ಇಟ್ಟುಕೊಳ್ಳಲು ಆಗುವುದಿಲ್ಲ. ಹೋಗಲಿ ಅಂತ ರಸ್ತೆಯಲ್ಲೂ ಬಿಸಾಡಲು ಬರುವುದಿಲ್ಲ. ಹಾಗೊಂದು ವೇಳೆ ಇಟ್ಟರೂ ಅದರ ವಾಸನೆ ಬದುಕಿರುವ ನಮಗೆ ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ. ಹಾಗಾಗಿ ಶವಸಂಸ್ಕಾರ ಮಾಡುವುದು ನಮ್ಮ ಮಾನವೀಯತೆಯ ಅಲ್ಲ ಅದು ನಮ್ಮೆಲ್ಲರ ಕರ್ತವ್ಯ. ಇಟ್ಸ್ ಅವರ್ ಡ್ಯೂಟಿ. ನಮ್ಮ ರೆಸ್ಪಾನ್ಸಿಬಿಲಿಟಿ. ಅದಕ್ಕೆ ‘ ಮಾನವೀಯತೆ ‘ಎಂಬ ಬಹುದೊಡ್ಡ ಪದವನ್ನು ಬಳಕೆ ಮಾಡಲು ಆಗುವುದಿಲ್ಲ.

ಇತ್ತೀಚೆಗೆ, ಪುತ್ತೂರಿನ ಮತ್ತು ಮಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ‘ಶವ ಸೆಟ್ಟಿಂಗ್’ ವ್ಯವಹಾರ ಕಂಡುಬಂದಿವೆ. ಆಸ್ಪತ್ರೆಯಲ್ಲಿ ಕೊರೋನಾ ರೋಗಿ ತೀರಿಕೊಂಡಾಗ ಆತನ ಸಂಬಂಧಿಕರ ಕಡೆಯವರು ಶವಸಂಸ್ಕಾರ ಮಾಡಲು ಮುಂದಾಗುವುದು ಸಹಜ. ಆದರೆ ಇತ್ತೀಚಿನ ‘ಪೋಸ್ಟರ್ ಸಂಸ್ಕಾರ’ ಕಾರ್ಯಕ್ರಮದ ನಿಮಿತ್ತ ಆಸ್ಪತ್ರೆಯವರು ಕುಟುಂಬಸ್ಥರು ಹೋಗಿ ಹೇಳಿದ ಕೂಡಲೇ ರಿಲೀಸ್ ಮಾಡುವುದಿಲ್ಲ. ಈ ಮೊದಲೇ ತಾವು ಸೆಟ್ಟಿಂಗ್ ಮಾಡಿಕೊಂಡ ತಂಡದವರು ಬಂದಾಗ ಮಾತ್ರ ಆಸ್ಪತ್ರೆಯವರು ಶವವನ್ನು ಹಸ್ತಾಂತರ ಮಾಡುವುದು. ತಮ್ಮ ಜತೆ ಸೆಟ್ಟಿಂಗ್ ಮಾಡಿದ ತಂಡ ಬರುವವರೆಗೆ ಯಾವ ಕಾರಣಕ್ಕೂ ಅವರು ಶವವನ್ನು ಬಿಟ್ಟುಕೊಡುವುದಿಲ್ಲ. ಡಾಕ್ಟರ್ ಬಂದಿಲ್ಲ, ಬಿಲ್ಲಿಂಗ್ ಸೆಕ್ಷನ್ ನಲ್ಲಿ ಕ್ಲಿಯರ್ ಆಗಿಲ್ಲ, ಡಿಸ್ಚಾರ್ಜ್ ಸಮ್ಮರಿ ರೆಡಿಯಾಗಿಲ್ಲ, ಪಿಪಿಈ ಕಿಟ್ ಅರೆಂಜ್ ಮಾಡುತ್ತಿದ್ದೇವೆ, ಅದಾಗಬೇಕು, ಇದಾಗಬೇಕು ಹೀಗೆ ನೂರಾರು ಸಬೂಬು ಹೇಳಿ ಕಾಲ ತಳ್ಳುತ್ತಾರೆ. ಆನಂತರ ತಾವು ಮೊದಲೇ ಸೆಟ್ಟಿಂಗ್ ಮಾಡಿಕೊಂಡ ತಂಡ ಬಂದಮೇಲೆ ಅವರಿಗೆ ಶವವನ್ನು ಹ್ಯಾಂಡ್ ಓವರ್ ಮಾಡುತ್ತಾರೆ. ಶವ ವಿಲೇವಾರಿಯಲ್ಲಿ ಕೂಡ ಈ ಜನರು ಈ ರೀತಿ ವರ್ತಿಸಿದರೆ ಇವರಿಗೆ ಏನನ್ನಬೇಕು….?
ಇವತ್ತು ನೋಡಿದರೆ ಪ್ರತಿಯೊಂದು ಕೋರೋನಾ ಸಂಬಂಧಿತ ಭ್ರಷ್ಟಾಚಾರಕ್ಕೆ ಮೂಲ ಕಾರಣ ನಮ್ಮ ಆಸ್ಪತ್ರೆಗಳಲ್ಲಿರುವ ಪರಮ ಭ್ರಷ್ಟ ವ್ಯವಸ್ಥೆ.

ಇವತ್ತು ಇಲ್ಲಿ ಸರಿಯಾಗಿರುವ ನಾವು ಮತ್ತು ನಮ್ಮ ಕುಟುಂಬಸ್ಥರ ಮುಂದೊಂದು ದಿನ ಯಾವುದು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿರಬಹುದು, ಅಥವಾ ಕೋವಿಡ್ ಸೋಂಕು ತಗುಲಿಸಿಕೊಂಡು ಮಕಾಡೆ ಮಲಗಿ ಹೊಗೆ ಹಾಕಿಸಿಕೊಳ್ಳುವ ಪ್ರಸಂಗ ಬರಬಹುದು. ಆಗ ಇವತ್ತಿನ ನಮ್ಮ ಜಾಗದಲ್ಲಿ ಮತ್ತೊಬ್ಬ ಬರುತ್ತಾನೆ. ಆತ ಪಿಪಿಇ ಕಿಟ್ ನ ಧರಿಸಿ ಶವಸಂಸ್ಕಾರಕ್ಕೆ ಇಳಿಯುತ್ತಾನೆ. ಇದೇ ಜೀವನ. ಅವತ್ತು ನಮ್ಮದೇ ಶವಕ್ಕೆ ಕಿತ್ತಾಟ ನಡೆಯಬಹುದು.

ಇನ್ನಾದರೂ ‘ಪೋಸ್ಟರ್ ಶವಸಂಸ್ಕಾರ’ ಹಿಂದೆ ನಮ್ಮ ಅಲೆದಾಟ ನಿಲ್ಲಲಿ. ಅನಿವಾರ್ಯ ಸಂಧರ್ಭಗಳಲ್ಲಿ ಧರ್ಮಭೇದ ಮರೆತು ಮಾನವೀಯತೆಯ ಸೇವೆ ಎಲ್ಲರೂ ಮಾಡುವಂತಾಗಲಿ. ಈ ಬದುಕಿನ ಅನಿಶ್ಚಿತತೆ ಮತ್ತು ಇನ್ನೊಬ್ಬರ ನೋವು ಜನರಿಗೆ ಅರ್ಥವಾಗಲಿ.

ಸುದರ್ಶನ್ ಬಿ. ಪ್ರವೀಣ್, ಬೆಳಾಲು ( ಸಂಪಾದಕರು)

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: