ಮೇ.11ರಿಂದ ಮೇ.15ರವರೆಗೆ ಎಲ್ಲ ವಹಿವಾಟು ಸ್ಥಗಿತಗೊಳಿಸಿದ ಕ್ಯಾಂಪ್ಕೊ

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ಯಾಂಪ್ಕೊ ಸಂಸ್ಥೆ ತಾತ್ಕಾಲಿಕವಾಗಿ ತನ್ನ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಕ್ಯಾಂಪ್ಕೊ, ಹೆಚ್ಚುತ್ತಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ಕೇರಳದಲ್ಲಿ ರಾಜ್ಯ ಸರಕಾರಗಳು ಲಾಕ್ಡೌನ್ ಜಾರಿಗೆ ತರಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಯಾಂಪ್ಕೊ ಕೂಡ ಈಗಾಗಲೇ ತನ್ನ ಖರೀದಿ ಪ್ರಕ್ರಿಯೆಗೆ ಕೆಲವೊಂದು ನಿಯಮಗಳನ್ನು ವಿಧಿಸಿ ಕಾರ್ಯಾಚರಿಸುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ತನ್ನ ಸದಸ್ಯರ ಮತ್ತು ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ರೋಗ ಹರಡುವಿಕೆಯ ನಿಯಂತ್ರಣಕ್ಕಾಗಿ ಸರಕಾರಗಳ ಪ್ರಯತ್ನವನ್ನು ಬೆಂಬಲಿಸಿ, ಮೇ 11ರಿಂದ 15ರವರೆಗೆ ಎರಡೂ ರಾಜ್ಯಾದ್ಯಂತ ಸಂಸ್ಥೆಯ ಯಾವುದೇ ಶಾಖೆಗಳಲ್ಲಿ ಸರಕು ಖರೀದಿ ಸಹಿತ ಯಾವುದೇ ವಹಿವಾಟುಗಳು ನಡೆಯುವುದಿಲ್ಲ ಎಂದು ತಿಳಿಸಿದೆ.

ಇದಲ್ಲದೆ, ಅಧ್ಯಯನದ ಪ್ರಕಾರ ಅಡಿಕೆಯ ಗ್ರಾಹಕ ಮಾರುಕಟ್ಟೆಯಲ್ಲಿನ ಬೇಡಿಕೆಯಲ್ಲಿ ಯಾವುದೇ ಬದಲಾವಣೆಗಳಿಲ್ಲದಿರುವುದರಿಂದ, ಅಡಿಕೆಯ ದರದ ಬಗ್ಗೆ ಬೆಳೆಗಾರರು ಯಾವುದೇ ಆತಂಕಪಡಬೇಕಾಗಿಲ್ಲ. ಮಾರುಕಟ್ಟೆಯನ್ನು ಬುಡಮೇಲುಗೊಳಿಸುವ ಯಾವುದೇ ಹುನ್ನಾರಗಳನ್ನು ಕ್ಯಾಂಪ್ಕೊ ಖಂಡಿಸುತ್ತದೆ. ಅಡಿಕೆ ಬೆಳೆಗಾರರು ಮಾರುಕಟ್ಟೆಯನ್ನು ಅಸ್ಥಿರಗೊಳಿಸುವ ಯಾವುದೇ ವದಂತಿಗಳಿಗೆ ಕಿವಿಗೊಡದೆ, ಸಹನೆಯನ್ನು ಕಾಯ್ದುಕೊಳ್ಳಬೇಕಾಗಿ ಸಂಸ್ಥೆಯ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಗಮನಿಸಿಕೊಂಡು ಸರಕಾರದ ನಡೆಗಳ ಅನುಸಾರ ಖರೀದಿ ಪ್ರಕ್ರಿಯೆಯನ್ನು ಪುನರಾರಂಭಿಸುವ ಎಲ್ಲ ಪ್ರಯತ್ನಗಳನ್ನು ಸಂಸ್ಥೆಯು ಮಾಡಲಿದೆ ಮತ್ತು ಮುಂದಿನ ದಿನಗಳಲ್ಲಿ ತನ್ನ ಸದಸ್ಯರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಬಗ್ಗೆ ಸಂಸ್ಥೆಯ ಆಡಳಿತ ಮಂಡಳಿ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ಕೃಷ್ಣ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.