ಮಗಳ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಮಂಚಕ್ಕೆ ಕಟ್ಟಿಕೊಂಡು 35 ಕಿ. ಮೀ ನಡೆದ ಅಪ್ಪ

ಸರ್ಕಾರಿ ಸಕಲ ವ್ಯವಸ್ಥೆಯ ಈ ಆಧುನಿಕ ಯುಗದಲ್ಲಿ ಕೂಡ ಯಾವ ರೀತಿಯಲ್ಲಿ ಸೋತು ಹೋಗುತ್ತಿದೆ ಎಂದು ತೋರಿಸುವ ಘಟನೆಯನ್ನು  ದುರವಸ್ಥೆ ಹಾಗೂ ಬಡತನದ ಕಾರಣದಿಂದಾಗಿ ವ್ಯಕ್ತಿಯೊಬ್ಬ ತನ್ನ ಮಗಳ ಶವವನ್ನು ಮಂಚದ ಮೇಲೆ ಇರಿಸಿ ಹೊತ್ತುಕೊಂಡು ಮರಣೋತ್ತರ ಪರೀಕ್ಷೆಗಾಗಿ 35 ಕಿಲೋಮೀಟರ್ ದೂರ ನಡೆದೇ ಸಾಗಿದ ದಯನೀಯ ಪ್ರಸಂಗವೊಂದು ನಡೆದಿದೆ.

ಈ ವ್ಯಕ್ತಿಯ 16 ವರ್ಷದ ಮಗಳು ಮೇ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂದರ್ಭದಲ್ಲಿ ಮನೆಗೆ ಬಂದಿದ್ದ ಸ್ಥಳೀಯ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಆಕೆಯ ಶವವನ್ನು ತರುವಂತೆ ಕುಟುಂಬಸ್ಥರಿಗೆ ಆದೇಶಿಸಿದ್ದರು. ವಾಹನ ಮಾಡಿಕೊಂಡು ಹೋಗುವಷ್ಟು ಆರ್ಥಿಕ ಚೈತನ್ಯವಿರದ ಈ ಕುಟುಂಬಕ್ಕೆ ಬೇರೆ ಯಾರೂ ವಾಹನದ ವ್ಯವಸ್ಥೆ ಮಾಡಿಕೊಡಲೂ ಇಲ್ಲ. ಪೊಲೀಸರು ಕೇವಲ ಆದೇಶಿಸಿ ಜಾಗ ಖಾಲಿ ಮಾಡಿದ್ದರು.

ಏನೂ ಮಾಡಲು ಅವಕಾಶ ಇಲ್ಲದ ಆಕೆಯ ತಂದೆ ಗ್ರಾಮದ ಕೆಲವರ ಸಹಾಯದಿಂದ ಮಗಳ ಶವವನ್ನು ಮಂಚದ ಮೇಲೆ ಇರಿಸಿ ಹೊತ್ತುಕೊಂಡೇ 35 ಕಿ.ಮೀ. ದೂರದಲ್ಲಿರುವ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾರೆ.

ಅಂತಹಾ ವಿಧೇಯ ಆಜ್ಞಾಪಾಲಕ ತಂದೆಯ ಹೆಸರು ಧೀರಾಪತಿ ಸಿಂಗ್ ಗೊಂಡ್. ಮಧ್ಯಪ್ರದೇಶದ ಗಡಾಯಿ ಎಂಬ ಗ್ರಾಮದ ಇವರು ಮಗಳ ಶವ ಹೊತ್ತುಕೊಂಡು ಸಿಂಗ್ರಾಲಿ ಆಸ್ಪತ್ರೆಗೆ ತೆರಳಿದ್ದಾರೆ. ‘ ನಾವು ಬೆಳಗ್ಗೆ 9 ಗಂಟೆಗೆ ಹೊರಟು ಸಂಜೆ 4 ಕ್ಕೆ ಆಸ್ಪತ್ರೆಗೆ ತಲುಪಿದ್ದೇವೆ. ಅಷ್ಟು ದೂರ ಮಂಚದ ಜತೆ ಶವವನ್ನು ಹೊತ್ತುಕೊಂಡು ಬರುವಾಗ ವಿಪರೀತ ಸುಸ್ತಾಗುತ್ತಿತ್ತು. ಜತೆಗೆ ಮಗಳು ಸತ್ತ ನೋವಲ್ಲಿ ನಾವಿದ್ದೆವು. ಅಷ್ಟು ಸಮಸ್ಯೆಯಾದರೂ ನಮಗೆ ನಮ್ಮ ಗ್ರಾಮಸ್ಥರು ನಮ್ಮೊಂದಿಗೆ ಬಂದದ್ದನ್ನು ಹೊರತುಪಡಿಸಿ ಬೇರೆ ಯಾರೂ ಸಹಾಯ ಮಾಡಲಿಲ್ಲ ಎಂದು ಗೊಂಡ್ ಹೇಳಿದ್ದಾರೆ.

ಆತನ ಮನೆಯಿಂದ ಒಂದು ಕಿ.ಮೀ. ದೂರದಲ್ಲಿ ರಸ್ತೆ ವ್ಯವಸ್ಥೆ ಇದ್ದು, ಯಾರಾದರೂ ವಾಹನ ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆ ಬಂದಿರುತ್ತಿರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಅರುಣ್ ಸಿಂಗ್, ಶವಗಳ ಸಾಗಣಿಕೆಗಾಗಿ ಇಲಾಖೆಗೆ ಸರ್ಕಾರದಿಂದ ಹಣ ಮಂಜೂರಾಗಿಲ್ಲ. ಹೀಗಾಗಿ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಶವ ಸಾಗಿಸಲು ವಾಹನದ ವ್ಯವಸ್ಥೆ ಮಾಡಲು ಆಗಿಲ್ಲ ಎಂದು ಹೇಳಿ ಕೈ ತೊಳೆದು ಕೊಂಡಿದ್ದಾರೆ.

Leave A Reply

Your email address will not be published.