ಕ್ಯಾಂಪ್ಕೋದಿಂದ 1 ಕೋ.ರೂ. ವೆಚ್ಚದ ಆಕ್ಸಿಜನ್ ಪೂರೈಕೆ

ಕೋವಿಡ್ 2ನೇ ಅಲೆಯಿಂದ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ಆಸ್ಪತ್ರೆಗಳಲ್ಲಿ ಮೂಲಭೂತವಾಗಿ ವೈದ್ಯಕೀಯ ಆಮ್ಲಜನಕದ ಕೊರತೆಯುಂಟಾಗಿರುವುದನ್ನು ಮನಗಂಡ ಆಂತರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ 1 ಕೋ.ರೂ. ವೆಚ್ಚದ ಆಕ್ಸಿಜನ್ ಪೂರೈಸಲು ನಿರ್ಧರಿಸಿದೆ.

ರಾಜ್ಯದ ವಿವಿಧ ಕಡೆಗಳಲ್ಲಿನ ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವ ನಿಟ್ಟಿನಲ್ಲಿ ಯೋಜನೆಯನ್ನು ಹಾಕಿಕೊಂಡಿದೆ. ಅದರಂತೆ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದಿಸುವ ಪ್ಲಾಂಟ್ ಅಳವಡಿಸಲು ನಿರ್ಧರಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಆಸ್ಪತ್ರೆಗಳಿಗೆ ಅಮ್ಲಜನಕದ ಜಂಬೋ ಸಿಲಿಂಡರ್‌ಗಳನ್ನು ಕ್ಯಾಂಪ್ಕೊ ಪೂರೈಸಲಿದೆ.

ಈ ನಿಟ್ಟಿನಲ್ಲಿ ಸಂಸ್ಥೆಯು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಮತ್ತು ಕರಾವಳಿ ಶಾಸಕರು, ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ.ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಲ್ಲಿ ಕಾರ್ಯತತ್ಪರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ. ಕೃಷ್ಣ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.