ಮದ್ಯ ಸಿಕ್ಕಿಲ್ಲ ಎಂದು ಆಲ್ಕೊಹಾಲ್ ಅಂಶ ಹೊಂದಿರುವ ಹೋಮಿಯೋಪತಿ ಸಿರಪ್ ಸೇವನೆ | ಆದದ್ದು ಘನಘೋರ ಅನಾಹುತ !

Share the Article

ಮದ್ಯಪಾನಕ್ಕೆ ಬದಲಿಯಾಗಿ ಆಲ್ಕೋಹಾಲ್ ಅಂಶ ಹೊಂದಿರುವ ಹೋಮಿಯೋಪತಿ ಸಿರಪ್ ಸೇವಿಸಿದ 7 ಮಂದಿ ಸಾವನ್ನಪ್ಪಿದ ಹಾಗೂ ಐವರು ಅಸ್ವಸ್ಥಗೊಂಡ ಘಟನೆ ಚತ್ತೀಸ್ಗಢದ ಬಿಲಾಸ್ಪುರ ಜಿಲ್ಲೆ ಕೊರ್ಮಿಯಲ್ಲಿ ಸಂಭವಿಸಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಆಲ್ಕೋಹಾಲ್ ಅಂಶ ಉಳ್ಳ ಹೋಮಿಯೋಪತಿ ಸಿರಪ್ ಕುಡಿದ 7 ಮಂದಿಯಲ್ಲಿ ನಾಲ್ವರು ತಮ್ಮ ಮನೆಯಲ್ಲಿ ಮಂಗಳವಾರ ತಡರಾತ್ರಿ ಹಾಗೂ ಇತರ ಮೂವರು ಎರಡು ಆಸ್ಪತ್ರೆಗಳಲ್ಲಿ ಬುಧವಾರ ಅಪರಾಹ್ನ ಮೃತಪಟ್ಟಿದ್ದಾರೆ ಎಂದು ಬಿಲಾಸ್ಪುರದ ಪೊಲೀಸ್ ಅಧೀಕ್ಷಕ ಪ್ರಶಾಂತ್ ಅಗರ್ವಾಲ್ ಹೇಳಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ ಕಮಲೇಶ್ ಧುರಿ (32), ಅಕ್ಷಯ ಧುರಿ (21), ರಾಜೇಶ್ ಧುರಿ (21) ಹಾಗೂ ಸಮ್ರು ಧುರಿ (25) ಶೇ. 91 ಆಲ್ಕೋಹಾಲ್ ಅಂಶವಿರುವ ಹೋಮಿಯೋಪತಿ ಸಿರಪ್ ಡ್ರೊಸೆರಾ-30 ಅನ್ನು ಮಂಗಳವಾರ ರಾತ್ರಿ ಸೇವಿಸಿದ ಬಳಿಕ ಮೃತಪಟ್ಟಿದ್ದಾರೆ.

ಇದೇ ಸಿರಪ್ ಸೇವಿಸಿದ್ದ ಖೇಮ್ಚಂದ್ ಧುರಿ (40), ಕೈಲಾಸ್ ಧುರಿ (50) ಹಾಗೂ ದೀಪಕ್ ಧುರಿ (30) ಅಸ್ವಸ್ಥಗೊಂಡಿದ್ದರು. ಅವರನ್ನು ಬಿಲಾಸ್ಪುರದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.