ಏಕಕಾಲದಲ್ಲಿ 9 ಮಕ್ಕಳನ್ನು ಹೆತ್ತ ಮಹಾತಾಯಿ

ಸಾಮಾನ್ಯವಾಗಿ ಮಹಿಳೆಯರು ಒಂದು ಸಲ ಗರ್ಭ ಧರಿಸುವುದು ಒಂದೇ ಮಗುವನ್ನು. ತಪ್ಪಿದರೆ ಅವಳಿ ಮಗುವಾಗುವುದು ಸಾಮಾನ್ಯ. ಯಾವಾಗಲೋ ಒಮ್ಮೆ ತ್ರಿವಳಿ ಶಿಶುಗಳಿಗೆ ಜನ್ಮ ನೀಡುವುದು ವಿಚಿತ್ರ ಎಂಬಂತೆ ಕಂಡು ಬರುವ ಘಟನೆ. ಆದರೆ ಇಲ್ಲೊಬ್ಬಳು ಮಹಾಮಹಿಮ ಮಹಾಮಹಿಳೆಯೊಬ್ಬಳು ಒಂದೆರಡಲ್ಲ, ಒಟ್ಟಿಗೆ 9 ಶಿಶುಗಳಿಗೆ ಏಕಕಾಲದಲ್ಲಿ ಜನ್ಮ ನೀಡಿದ್ದಾಳೆ.

ಮಾಲಿ ದೇಶದ ಹಲಿಮಾ ಸಿಸ್ಸಿ (25) ಎಂಬಾಕೆಯೇ ಮೊನ್ನೆ ಮಂಗಳವಾರ ಏಕ ಕಾಲದಲ್ಲಿ 9 ಮಕ್ಕಳಿಗೆ ಜನ್ಮ ನೀಡಿ ಜಗತ್ತನ್ನೇ ಅಚ್ಚರಿಗೆ ನೂಕಿದ ಮಹಾತಾಯಿ. ಅಕೆಯ ಗರ್ಭದಿಂದ ಆ 9 ಜನ ತುಂಟ ಮಕ್ಕಳನ್ನು ಹೆರಿಗೆ ಮಾಡಿಸಲು ಇಬ್ಬರು ವೈದ್ಯರು ಭಾರಿ ಶ್ರಮಿಸಬೇಕಾಯಿತು. ಒಂದು ಮಗುವನ್ನು ಹೊರ ತೆಗೆಯುತ್ತಿದ್ದಂತೆ ಮತ್ತೊಂದು ಮಗು ತಲೆ ತೋರಿಸುತ್ತಿತ್ತು. ಹೀಗೆ, ಒಂದರ ಹಿಂದೆ ಒಂದು ಮಗು ಹೊರಗೆ ಬಂದು, ಒಟ್ಟು 9 ಮಕ್ಕಳು ಸಾಲುಗಟ್ಟಿ ಹೊರಬಂದಿವೆ.
ಜನಿಸಿದ 9 ಮಕ್ಕಳಲ್ಲಿ ಐದು ಹೆಣ್ಣು ಹಾಗೂ ನಾಲ್ಕು ಗಂಡು ಶಿಶುಗಳಾಗಿವೆ.

ಒಂದೇ ಹೆರಿಗೆಯಲ್ಲಿ ಒಂಬತ್ತು ಮಕ್ಕಳು ಜನಿಸಿರುವ ಸುದ್ದಿ ಆ ದೇಶದ ನಾಯಕರಿಗೂ ತಲುಪಿದೆಯಂತೆ. ತಾಯಿ ಹಾಗೂ ಒಂಬತ್ತು ಮಕ್ಕಳು ಕ್ಷೇಮವಾಗಿ, ಆರೋಗ್ಯವಾಗಿವೆ ಎಂದು ಆ ದೇಶದ ಆರೋಗ್ಯ ಸಚಿವ ಫಾಂಟಾ ಸಿಬಿ ಹೇಳಿದ್ದಾರೆ. ಸ್ಕ್ಯಾನಿಂಗ್‌ ಸಮಯದಲ್ಲಿ ಹೆಚ್ಚು ಸಂಖ್ಯೆಯ ಮಕ್ಕಳು ಜನಿಸುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದರಂತೆ. 

ಅಂದಾಜಿನ ಪ್ರಕಾರ ಮಹಿಳೆ ಏಳು ಮಕ್ಕಳಿಗೆ ಜನ್ಮ ನೀಡಬಹುದು ಎಂದು ಭಾವಿಸಿದ್ದಳು. ಆದರೆ, ಒಮ್ಮೆಗೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿರುವುದಕ್ಕೆ ತಮಗೆ ಆಶ್ಚರ್ಯ, ಅಘಾತವಾಗಿದೆ ಎಂದು ಆ ಮಹಾತಾಯಿ ಹಲೀಮಾ ಹೇಳಿದ್ದಾರೆ. ಆದರೆ, ಎಲ್ಲಾ. ಮಕ್ಕಳೂ ಆರೋಗ್ಯವಾಗಿ ಇರುವುದನ್ನು ಕಂಡು ತುಂಬಾ ಖುಷಿಯಾಗಿದೆ ಎಂದು ಆ ಮಕ್ಕಳ ಜನ್ಮಕ್ಕೆ ಕಾರಣನಾದ ಆಕೆಯ ಪತಿ ಹೇಳಿದ್ದಾನೆ. ಸಿಸೇರಿಯನ್ ಮೂಲಕ ಹೆರಿಗೆ ಪ್ರಕ್ರಿಯೆ ನಡೆಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Leave A Reply

Your email address will not be published.