ಕೊರೋನಾ ಆಟಾಟೋಪ | ದೇಶದಲ್ಲಿ ಸಾವಿನ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ | ಮುಂದಿನ ಆರು ವಾರಗಳು ಭಾರತಕ್ಕೆ ಅತ್ಯಂತ ಕಠಿಣ – ತಜ್ಞರ ಎಚ್ಚರಿಕೆ

ಕೊರೋನ ಸೋಂಕಿನ ಎರಡನೇ ಅಲೆಯಿಂದ ಉಂಟಾಗುವ ಸಾವಿನ ಪ್ರಮಾಣ ಮುಂಬರುವ ವಾರಗಳಲ್ಲಿ ಭಾರತದಲ್ಲಿ ದುಪ್ಪಟ್ಟಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ತಂಡವೊಂದು ಗಣಿತಶಾಸ್ತ್ರದ ಮಾದರಿಯ ಆಧಾರದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಈಗಿರುವ ಸ್ಥಿತಿಯೇ ಮುಂದುವರಿದರೆ ಜೂನ್ 11ರ ವೇಳೆಗೆ ದೇಶದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,04,000 ಕ್ಕೇರಲಿದೆ. ವಾಶಿಂಗ್ಟನ್ ವಿವಿಯ ಇನ್‌ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುವೇಷನ್ ವಿಭಾಗದ ಅಧ್ಯಯನದ ಪ್ರಕಾರ ಜುಲೈ ಅಂತ್ಯದ ವೇಳೆ ಭಾರತದಲ್ಲಿ ಕೊರೋನ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ 1,018,879ಕ್ಕೇರಲಿದೆ.

ಭಾರತದಂತಹ ವಿಶಾಲ ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣವನ್ನು ಅಂದಾಜಿಸಲು ಕಷ್ಟಸಾಧ್ಯವಾದರೂ, ಈ ಮುನ್ಸೂಚನೆಗಳು ಭಾರತದಲ್ಲಿ ಪರೀಕ್ಷೆ ಮತ್ತು ಸುರಕ್ಷಿತ ಅಂತರ ಪಾಲನೆಯ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವನ್ನು ಒತ್ತಿ ಹೇಳಿವೆ.

ಇಲ್ಲದಿದ್ದರೆ ವಿಶ್ವದಲ್ಲಿ ಕೊರೋನದಿಂದ ಅತ್ಯಧಿಕ ಸಾವು ಸಂಭವಿಸಿದ ದೇಶಗಳ ಪಟ್ಟಿಯಲ್ಲಿ ಅಮೆರಿಕವನ್ನು ಮೀರಿ ಭಾರತ ಅಗ್ರಸ್ಥಾನ ಪಡೆಯುವ ಎಲ್ಲಾ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

‘ಮುಂದಿನ 4 ರಿಂದ 6 ವಾರಗಳು ಭಾರತಕ್ಕೆ ಬಹಳ ಕಠಿಣ ಸಮಯವಾಗಲಿದೆ. ಈ ಸವಾಲನ್ನು ಈಗಲೇ ಸ್ವೀಕರಿಸಿ ಕಾರ್ಯನಿರ್ವಹಿಸಿ ಸೋಂಕು ಮತ್ತು ಸಾವಿನ ಸಂಖ್ಯೆಯನ್ನು ಕನಿಷ್ಟಗೊಳಿಸಲು ಪ್ರಯತ್ನಿಸಬೇಕಿದೆ.

ಈ ಸಮಸ್ಯೆಯಿಂದ ದೂರವಿರುವ ಸ್ಥಿತಿಯಲ್ಲಿ ಭಾರತ ಇಲ್ಲ’ ಎಂದು ಬ್ರೌನ್ ವಿವಿ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಡೀನ್ ಆಶೀಶ್ ಝಾ ಹೇಳಿದ್ದಾರೆ.

ದಿಲ್ಲಿ, ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ಸೇರಿದಂತೆ ಸುಮಾರು 12 ರಾಜ್ಯಗಳಲ್ಲಿ ಕೊರೋನ ಸೋಂಕಿನ ದೈನಂದಿನ ಸಾವಿನ ಪ್ರಕರಣ ಸ್ಥಿರಗೊಳ್ಳುವ ಲಕ್ಷಣಗಳು ಕಾಣಿಸಿವೆ ಎಂದು ಭಾರತದ ಆರೋಗ್ಯ ಇಲಾಖೆ ಹೇಳಿದೆ.

Leave A Reply

Your email address will not be published.