ಪುತ್ತೂರಿನ ಗಿರಿಜಾ ಕ್ಲಿನಿಕ್ ಇನ್ನು ಕೋವಿಡ್ ಕೇರ್ ಸೆಂಟರ್ | ಪುತ್ತೂರು ಶಾಸಕರ ಯೋಚನೆಗೆ ಡಾ.ಗೌರಿ ಪೈ ಸಮ್ಮತಿ

ಪುತ್ತೂರು: ಪ್ರಸೂತಿ ಕೇಂದ್ರವಾಗಿ ಸಾಕಷ್ಟು ಜನಮನ್ನಣೆ ಗಳಿಸಿದ್ದ ಪುತ್ತೂರಿನ ಗಿರಿಜಾ ಕ್ಲಿನಿಕ್, ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡುಗೊಳ್ಳಲು ಸಜ್ಜಾಗಿದೆ.

ಸುಮಾರು ೮ ವರ್ಷಗಳ ಹಿಂದಿನವರೆಗೂ ಕಾರ್ಯಾಚರಿಸುತ್ತಿದ್ದ ಗಿರಿಜಾ ಕ್ಲಿನಿಕ್, ನಂತರದ ದಿನಗಳಲ್ಲಿ ಬಾಗಿಲು ಮುಚ್ಚುವಂತಾಯಿತು. ಆದರೂ ಅಲ್ಲಿರುವ ವೈದ್ಯಕೀಯ ಪರಿಕರಗಳು, ರೋಗಿಗಳಿಗೆ ಅಗತ್ಯವಿರುವ ಸಾಮಗ್ರಿಗಳು ಇನ್ನೂ ಹಾಗೆಯೇ ಉಳಿದಿದೆ. ಅದರ ಪ್ರಯೋಜನವನ್ನು ಕೋವಿಡ್ ರೋಗಿಗಳಿಗೆ ನೀಡಲು ವ್ಯವಸ್ಥೆ ನಡೆಯುತ್ತಿದೆ.

ಈ ವಿಷಯವನ್ನು ಶಾಸಕ ಸಂಜೀವ ಮಠಂದೂರು ಅವರು ಈಗಾಗಲೇ ದೃಢಪಡಿಸಿದ್ದಾರೆ. ಡಾ. ಗೌರಿ ಪೈ ಅವರ ಜೊತೆ ಮಾತನಾಡಿದ್ದು, ಮುಂದೆ ಅಗತ್ಯ ಬಿದ್ದಲ್ಲಿ ಗಿರಿಜಾ ಕ್ಲಿನಿಕ್ ಅನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬಳಸಿಕೊಳ್ಳಲಾಗುವುದು ಎಂಬ ವಿಷಯವನ್ನು ತಿಳಿಸಿದ್ದಾರೆ.

ಡಾ. ಗೌರಿ ಪೈ ಅವರು ಗಿರಿಜಾ ಕ್ಲಿನಿಕ್ ಕಟ್ಟಡವನ್ನು ಸಮಾಜಮುಖಿ ಕೆಲಸಕ್ಕೆ ನೀಡುವುದೇ ಸಂತೋಷದ ವಿಚಾರ ಎಂದಿದ್ದಾರೆ.

ಈಗಾಗಲೇ ಪುತ್ತೂರಿನ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಆದರೆ ಇದುವರೆಗೆ ಅಲ್ಲಿಗೆ ಯಾವುದೇ ರೋಗಿಗಳನ್ನು ಶಿಫ್ಟ್ ಮಾಡುವ ಅನಿವಾರ್ಯತೆ ಎದುರಾಗಿಲ್ಲ. ಸರಕಾರಿ ಹಾಗೂ ಕೆಲ ಖಾಸಗಿ ಆಸ್ಪತ್ರೆಗಳಲ್ಲಿಯೂ ಅಗತ್ಯ ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ಸಂಭಾವ್ಯ ಹೋರಾಟಕ್ಕೆ ಸಿದ್ಧತೆಯಾಗಿ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಗುರುತಿಸಿರುವ ಕೋವಿಡ್ ಕೇರ್ ಸೆಂಟರ್‌ಗಳು ಭರ್ತಿಯಾಗಿ ಇನ್ನಷ್ಟು ಬೆಡ್‌ಗಳ ಅನಿವಾರ್ಯತೆ ಎದುರಾದರೆ, ಆಗ ಗಿರಿಜಾ ಕ್ಲಿನಿಕ್ ಅನ್ನು ಶುಚಿಗೊಳಿಸಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗುವುದು.

ಗಿರಿಜಾ ಕ್ಲಿನಿಕ್‌ನ ಎಲ್ಲಾ ಪರಿಕರಗಳು, ಸಾಮಗ್ರಿಗಳು ಹಾಗೇ ಇವೆ. ಸುಮಾರು ೪೫ರಿಂದ ೫೦ರಷ್ಟು ಕೊಠಡಿಗಳು, ನರ್ಸ್ ಕೊಠಡಿಗಳು, ಬೆಡ್‌ಗಳು, ಬೆಡ್ ಶೀಟ್‌ಗಳು ಸೇರಿದಂತೆ ಅಗತ್ಯ ಸೌಲಭ್ಯಗಳು ಇವೆ. ಅವನ್ನು ಬಳಸಿಕೊಳ್ಳಬಹುದು ಎಂದು ಡಾ. ಗೌರಿ ಪೈ ಅವರು ತಿಳಿಸಿದ್ದಾರೆ.

ನನ್ನಿಂದ ಗಿರಿಜಾ ಕ್ಲಿನಿಕನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ. ನನ್ನೆಲ್ಲಾ ಕೆಲಸ ಕಾರ್ಯಗಳು ಆನಂದಾಶ್ರಮದಲ್ಲೇ ಸ್ಥಿರವಾಗಿದೆ. ಆದ್ದರಿಂದ ಕೋವಿಡ್ ಕೇರ್ ಸೆಂಟರ್ ಆಗಿ ಬಳಕೆ ಮಾಡುತ್ತಾರೆ ಎಂದರೆ ನಾನು ಬಹಳ ಸಂತೋಷ ಪಡುತ್ತೇನೆ.

ನಾನು ಸಮಾಜದ ಒಂದು ಭಾಗವೇ ಆಗಿರುವುದರಿಂದ, ಸಮಾಜಕ್ಕೆ ಇದು ಉಪಯೋಗವಾಗಲಿ. ಕೋವಿಡ್ ಅಲೆ ಬಂದು ಹೋಗುವವರೆಗೆ ಬಳಕೆ ಮಾಡಲಿದ್ದಾರೆ. ಆದರೆ ಗಿರಿಜಾ ಕ್ಲಿನಿಕ್ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದರೆ, ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಕೆಲಸ ಮಾಡಬೇಕಷ್ಟೇ ಎಂದು
ಡಾ. ಗೌರಿ ಪೈ, ಸ್ಥಾಪಕರು, ಗಿರಿಜಾ ಕ್ಲಿನಿಕ್, ಪುತ್ತೂರು ತಿಳಿಸಿದ್ದಾರೆ.

Leave A Reply

Your email address will not be published.