ಬಾಡಿಗೆ ಕೇಳಿದ ಮಹಿಳೆಗೆ ರೌಡಿಗಳನ್ನು ಬಿಟ್ಟು ಬೆದರಿಕೆ: “ಬಾಡಿಗೆ ಕೇಳಿದರೆ ಬಾಂಬ್ ಇಟ್ಟು ಬಿಲ್ಡಿಂಗ್‌ ಉಡಾಯಿಸುವೆ ” ಎಂದರಂತೆ ಮಾಜಿ ಸಚಿವರು

ಮಂಗಳೂರು: ಕಟ್ಟಡದ ಬಾಡಿಗೆ ನೀಡುವಂತೆ ಕೇಳಿದ ಮಹಿಳೆ ಮೇಲೆ ಸ್ಥಳೀಯ ರೌಡಿಗಳನ್ನು ಬಿಟ್ಟು “ಬಾಡಿಗೆ ಕೇಳಿದರೆ ಬಿಲ್ಡಿಂಗ್‌ಗೆ ಬಾಂಬ್ ಇಟ್ಟು ಉರುಳಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಸಚಿವ ನಾಗರಾಜ ಶೆಟ್ಟಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ಭೂಮಿ ರಾಮಚಂದ್ರ ಅವರು ಮಾಜಿ ಸಚಿವ ನಾಗರಾಜ ಶೆಟ್ಟಿ ವಿರುದ್ಧ ದೂರು ನೀಡಿದ್ದಾರೆ.

ಅತ್ತಾವರ ರಸ್ತೆಯ ಕೆ.ಎಂ.ಸಿ ಆಸ್ಪತ್ರೆ ಸಮೀಪ ಭೂಮಿ ರಾಮಚಂದ್ರಪ್ಪ ಎಂಬವರಿಗೆ ಸೇರಿದ ಬಹು ಮಹಡಿ ವಾಣಿಜ್ಯ ಕಟ್ಟಡವಿದ್ದು, ಮೇ. 3 ರಂದು ಬೆಳಗ್ಗೆ ಇಬ್ಬರು ಅಪರಿಚಿತ ಯುವಕರು ವಾಣಿಜ್ಯ ಕಟ್ಟಡದ ಶೆಟರ್ ನ್ನು ಸುತ್ತಿಗೆಯಿಂದ ಹೊಡೆದು ಬೀಗ ಮುರಿದು ಒಳಗೆ ನುಗ್ಗಿದ್ದಾರೆ. ಬಳಿಕ ವಿದ್ಯಾರ್ಥಿಗಳಂತೆ ಬ್ಯಾಗು ಹಾಕಿಕೊಂಡು ಲೋಕಲ್ ರೌಡಿಗಳು ಬಂದಿದ್ದಾರೆ.

ಈ ವೇಳೆ ಮಾಜಿ ಸಚಿವ ನಾಗರಾಜ ಶೆಟ್ಟಿ ತನ್ನ ಹಿಂಬಾಲಕರ ಜತೆಗೆ ಅನಧಿಕೃತವಾಗಿ ವಾಣಿಜ್ಯ ಕಟ್ಟಡಕ್ಕೆ ಪ್ರವೇಶಿಸಿ, ಭೂಮಿ ರಾಮಚಂದ್ರಗೆ ಸೇರಿದ ಲ್ಯಾಪ್‌ಟಾಪ್‌ , ವಜ್ರದ ಒಡವೆಗಳು, ಅತ್ತಾವರ ಅಪಾರ್ಟ್ ಮೆಂಟ್ ಮತ್ತು ಬಹುಮಹಡಿ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು, ಇಂಡಮಿಟಿ ಬಾಂಡ್, ಚೆಕ್ ಬುಕ್, ಇತರೆ ದಾಖಲೆಗಳನ್ನು ನಾಗರಾಜ ಶೆಟ್ಟಿ ಜತೆ ಬಂದವರು ದೋಚಿದ್ದಾರೆ.

ಅತಿಕ್ರಮ ಪ್ರವೇಶ ಮಾಡುವ ಜತೆಗೆ ಸ್ಥಳೀಯ ಗೂಂಡಾಗಳನ್ನು ಕರೆಸಿ ಪೊಲೀಸರು ಈ ಹಿಂದೆ ಹಾಕಿದ್ದ ಬೀಗ ಮುರಿದು ತನ್ನದೇ ಬೀಗ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಇದೇ ವೇಳೆ, ನಮ್ಮನ್ನು ಯಾರಾದರೂ ತಡೆದರೆ, ಈ ಬಿಲ್ಡಿಂಗ್‌ಗೆ ಬಾಂಬ್ ಹಾಕಿ ಉರುಳಿಸುತ್ತೇನೆ ಎಂದು ಕಟ್ಟಡದ ಸೆಕ್ಯುರಿಟಿ ಗಾರ್ಡ್ ಗೋಬಿಂದ್ ಎಂಬುವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತು ಭೂಮಿ ರಾಮಚಂದ್ರ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Leave A Reply

Your email address will not be published.