ಮರದ ಕೆಳಗೇ ಹಾಸಿಗೆ, ಮರದ ಕೊಂಬೆಯೇ ಸಲೈನ್ ಬಾಟಲ್ ಸ್ಟ್ಯಾಂಡ್ | ಹಾಗಿದ್ದರೂ ಅವರು ಚಿಕಿತ್ಸೆಗೆ ಪಟ್ಟಣದ ಕಡೆ ತಿರುಗಿ ನೋಡಲ್ಲ ಯಾಕೆ ಗೊತ್ತಾ ?!

ದೇಶದಲ್ಲಿ ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದರೆ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಪೂರ್ತಿ ಭರ್ತಿಯಾಗಿದೆ. ಹೀಗಿರುವಾಗ ಹಳ್ಳಿಯ ಜನ ನಗರಕ್ಕೆ ಬಂದರೆ ಕೋರೋನಾ ಬರಬಹುದು ಎಂದು ಹೆದರಿ ಆ ಗ್ರಾಮದ ರೋಗಿಗಳು ಮರದಡಿಯಲ್ಲೇ ಚಿಕಿತ್ಸೆ ಪಡೆದಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಈ ರೀತಿಯ ಘಟನೆ ನಡೆದಿದ್ದು, ಅಲ್ಲಿನ ಹಳ್ಳಿಯೊಂದರಲ್ಲಿ ಅನೇಕರು ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಜಿಲ್ಲಾಸ್ಪತ್ರೆಗೆ ತೆರಳಿದರೆ ಕೋರೋನಾ ಪರೀಕ್ಷೆ ಮಾಡಿಸಲು ಹೇಳುತ್ತಾರೆ ಎನ್ನುವ ಭಯದಿಂದ ಅವರು ಗ್ರಾಮದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗ್ರಾಮದ ಆಸ್ಪತ್ರೆಯ ಕೂಡ ಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲೇ ಹತ್ತಿರದಲ್ಲಿರುವ ಮರಗಳ ಕೆಳಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮರದ ಕೆಳಗೆ ಚಾಪೆ ಮತ್ತು ಹಾಸಿಗೆ ಹಾಸಿ, ಮರದ ಕೊಂಬೆಗಳಿಗೆ ಸಲೈನ್ ಬಾಟೆಲ್‌ಗಳನ್ನು ಕಟ್ಟಿ ರೋಗಿಗಳಿಗೆ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಈ ರೀತಿಯ ಚಿಕಿತ್ಸೆ ನೀಡುತ್ತಿರುವ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ಜ್ವರ, ತಲೆನೋವಿನಂತಹ ರೋಗ ಲಕ್ಷಣವಿರುವವರು ದಯಮಾಡಿ ಕೋರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. ಆದರೆ ಪಟ್ಟಣದಲ್ಲಿ ಕೊರೋನಾ ಸಾಲು ಸಾಲು ಜನರನ್ನು ಕೊಂದು ಮಲಗಿಸುತ್ತಿರುವಾಗ ಭಯಾಗ್ರಸ್ತ ಜನ ಪೇಟೆಯತ್ತ ಮುಖ ಮಾಡಲು ಹೆದರುತ್ತಿದ್ದಾರೆ.

Leave A Reply

Your email address will not be published.