ಮಂಗಳೂರು ದಕ್ಕೆಯಲ್ಲಿ ಮೀನು ಖರೀದಿಗೆ ಸಾರ್ವಜನಿಕರಿಗಿಲ್ಲ ಅವಕಾಶ : ದ.ಕ. ಜಿಲ್ಲಾಧಿಕಾರಿ

ಮಂಗಳೂರಿನ ಬಂದರ್ ದಕ್ಕೆಯ ಮೀನುಗಾರಿಕಾ ಬಂದರಿನಲ್ಲಿ ಚಿಲ್ಲರೆ ಮೀನು ಮಾರಾಟಗಾರರು ಮೀನು ಮಾರಾಟ ಮಾಡುವುದು ಹಾಗೂ ಸಾರ್ವಜನಿಕರು ಅವರಿಂದ ಮೀನು ಖರೀದಿಸುವುದನ್ನು ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ. ತಿಳಿಸಿದ್ದಾರೆ.

ಹಳೆ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಕುರಿತು ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಸಕರು ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಜೊತೆ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಮೀನುಗಾರಿಕಾ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳದೆ ಮೀನುು ಖರೀದಿಗೆ ದುಂಬಾಲು ಬೀಳುತ್ತಿದ್ದಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಇರುವ ಕಾರಣ ಸಾರ್ವಜನಿಕರು ಬಂದರು ದಕ್ಕೆಯಲ್ಲಿ ಮೀನು ಖರೀದಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಒಂದು ವೇಳೆ ನಿಯಮಗಳ ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ಧ ದಂಡ ವಸೂಲಿ ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಾರ್ವಜನಿಕರು ಮೀನುಗಳನ್ನು ಸ್ಥಳೀಯ ವ್ಯಾಪ್ತಿಯ ಮೀನು ಮಾರುಕಟ್ಟೆಗಳಲ್ಲಿ ಖರೀದಿಸಿ ಅಲ್ಲೇ ಕಟ್ಟಿಂಗ್ ಮತ್ತು ಶುಚಿಗೊಳಿಸಬಹುದು ಎಂದ ಡಿಸಿ ಬಂದರ್ ಮನಪಾ ವ್ಯಾಪ್ತಿಯೊಳಗಿನ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಹೊರ ರಾಜ್ಯದ ಮೀನು ತಂದು ರಿಟೇಲ್ ಅಥವಾ ಚಿಲ್ಲರೆ ವ್ಯಾಪಾರವನ್ನು ಕೂಡ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಬಂದರಿನಲ್ಲಿ ಓಡಾಡುವುದನ್ನು ಕಡ್ಡಾಯವಾಗಿ ನೀಷೇಧಿಸಲಾಗಿದೆ ಎಂದರು.

ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವೀಡಿಯೋ, ಚಿತ್ರಗಳನ್ನು ಸಂಗ್ರಹಿಸುವಂತೆ ಮತ್ತು ಅಲ್ಲಿ ಹೋಮ್‌ಗಾರ್ಡ್ಸ್ ಅಥವಾ ಪೋಲಿಸರನ್ನು ನೇಮಕ ಮಾಡಬೇಕೆಂದು ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.

ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ 1 ವರ್ಷದ ಜೈಲು ಶಿಕ್ಷೆ ಅಥವಾ ದಂಡ/ಆದೇಶ ಪಾಲಿಸದೆ ವ್ಯಕ್ತಿಯ ಜೀವಹಾನಿ ಅಥವಾ ಅಪಾಯಕ್ಕೆ ದೂಡಿದರೆ 2 ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು.

ಕರ್ನಾಟಕ ಸಾಂಕ್ರಾಮಿಕ ರೋಗ ಅಧಿನಿಯಮ 2020ರ ಕಲಂ 5 ರಂತೆ ಮೂರು ತಿಂಗಳಿಗೆ ಕಡಿಮೆಯಿಲ್ಲದ ಅಂದರೆ ಐದು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆಯೊಂದಿಗೆ ಮತ್ತು 50 ಸಾವಿರದಿಂದ 2 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವರ್ತಕರು ಕಾರ್ಮಿಕರಿಗೆ ಸ್ಯಾನಿಟೈಸರ್ ಮತ್ತು ಸಾಧ್ಯವಾಗುವಷ್ಟು ಬಟ್ಟೆಯಿಂದ ತಯಾರಿಸಿರುವ ಮಾಸ್ಕ್‌ಗಳನ್ನು ಒದಗಿಸಬೇಕು. ಬಂದರ್ ದಕ್ಕೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದರೆ ಮೀನುಗಾರಿಕಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ ಎಂದರು.

ಸಭೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ದಿನೇಶ್‌ ಕುಮಾರ್, ಸಹಾಯಕ ಪೊಲೀಸ್‌ ಆಯುಕ್ತ ಪಿ.ಎ.ಹೆಗ್ಡೆ ಉಪಸ್ಥಿತರಿದ್ದರು.

Leave A Reply

Your email address will not be published.