ಮಾಸ್ಕ್ ಧರಿಸಿಲ್ಲವೆಂದು ಬಸ್ ಸ್ಟಾಂಡ್ ನಲ್ಲಿ ನಿಂತಿದ್ದ ಕೂಲಿ ಕಾರ್ಮಿಕನಿಗೆ ಚೀಟಿ ಹರಿದು, ನಂತರ ಬೇಸ್ತು ಬಿದ್ದ ಪಂಚಾಯತ್ ಅಧಿಕಾರಿ !!

ಮಾಸ್ಕ್ ಧರಿಸಿಲ್ಲವೆಂದು ಕೂಲಿ ಕಾರ್ಮಿಕನೋರ್ವನಿಗೆ ದಂಡ ವಿಧಿಸಿದ ಕಡಬ ಪಟ್ಟಣ ಪಂಚಾಯತ್ ನ ಕೊರೋನಾ ವಾರಿಯರ್ ಅಧಿಕಾರಿಯೋರ್ವರು ನಂತರ ಪೇಚಿಗೆ ಸಿಲುಕಿದ ಘಟನೆ ಕಡಬದಲ್ಲಿ ನಡೆದಿದೆ.

ಕೂಲಿ ಕೆಲಸಕ್ಕೆಂದು ತೆರಳಿ ಹಿಂತಿರುಗುತ್ತಿದ್ದ ದಂಪತಿ ಕಡಬ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಮಾಸ್ಕ್ ಧರಿಸಿರಲಿಲ್ಲ. ಆಗ ಅಲ್ಲಿಗೆ ಬಂದ ಕಡಬ ಪಟ್ಟಣ ಪಂಚಾಯತ್ ನ ಕೊರೋನಾ ವಾರಿಯರ್‌ ತಂಡದ ಅಧಿಕಾರಿಯೋರ್ವರು ಉತ್ಸಾಹದಿಂದ 100 ರೂ. ದಂಡ ವಿಧಿಸಿ ಚೀಟಿ ಹರಿದಿದ್ದಾರೆ.

ಈ ವೇಳೆ ಕೂಲಿ ಕಾರ್ಮಿಕ ತನ್ನಲ್ಲಿ ಹಣ ಇಲ್ಲ ಎಂದಿದ್ದಾನೆ. ಎಷ್ಟೇ ಹುಡುಕಿದರೂ ಆತನ ಜೇಬಿನಲ್ಲಿ ಹಣ ಸಿಕ್ಕಿಲ್ಲ. ಕೊನೆಗೆ, ತನ್ನ ಕೈಯಲ್ಲಿದ್ದ 10 ರೂ. ವನ್ನು ಅಧಿಕಾರಿಯ ಕೈಗಿತ್ತಿದ್ದಾರೆ. ಆದರೆ ಈಗಾಗಲೇ 100 ರೂಪಾಯಿ ರಶೀದಿ ಹರಿದ ಅಧಿಕಾರಿ ಬೇರೆ ದಾರಿ ಕಾಣದೆ ತನ್ನ ಕೈಯಿಂದ ಉಳಿದ 90 ರೂಪಾಯಿ ಸೇರಿಸಿ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.

ಈ ಕಾಲದಲ್ಲಿ ಎಲ್ಲರ ಕೈಯಲ್ಲೂ ಒಂದಷ್ಟು ದುಡ್ಡು ಇರುತ್ತದೆ ಎನ್ನುವುದು ಒಂದು ನಂಬಿಕೆ.  ನಿನ್ನೆ ನಿಜಕ್ಕೂ ಯಾವ ಮೂಲೆಯಲ್ಲಿ ಹುಡುಕಿದರೂ ಆ ಕೂಲಿ ಕಾರ್ಮಿಕನ ಜೇಬಿನಲ್ಲಿ 10 ರೂಪಾರಿಗಿಂತ ಜಾಸ್ತಿ ಹುಟ್ಟಲಿಲ್ಲ. ಅತ್ತ ಅಧಿಕಾರಿಗಳು ಒತ್ತಡದಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ, ಸರಕಾರದ ನಿಯಮ ಪಾಲನೆಗೆ ಹೊರಟು ಸಾರ್ವಜನಿಕರಿಂದ ಹಿಡಿಶಾಪಕ್ಕೆ ಒಳಗಾಗುವುದರ ಜತೆಗೆ, ಇಂತಹ ಅನಿವಾರ್ಯ ಪ್ರಸಂಗ ಎದುರಿಸಬೇಕಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಪಂಚಾಯತ್ ಅಧಿಕಾರಿಯವರು, ಮಾಸ್ಕ್ ಧರಿಸದ ಕಾರಣ ನಾವು ಅನಿವಾರ್ಯವಾಗಿ ದಂಡ ವಿಧಿಸಲೇ ಬೇಕಾಗುತ್ತದೆ. ಆದರೆ ಸಾರ್ವಜನಿಕರ ಬಳಿ ಹಣ ಇಲ್ಲ ಎಂಬ ವಿಚಾರ ನಮ್ಮ ಗಮನಕ್ಕೆ ಬರುವುದಿಲ್ಲ. ಹಣ ನೀಡಿದ ನಂತರ ರಶೀದಿ ನೀಡೋಣ ಎಂದರೆ ಎಲ್ಲರೂ ತಮ್ಮ ಬಳಿ ಹಣ  ಇಲ್ಲ ಎಂದೇ ಹೇಳೋದು. ದಂಡ ಬರೆದು ರಶೀದಿ ನೀಡಿದರೆ ಇಂತಹ ಸ್ಥಿತಿ ಎದುರಾಗುತ್ತಿದೆ ಎಂದು ಹೇಳಿದ್ದಾರೆ.

ಲಾಠಿ ಮತ್ತು ಚೀಟಿ ಎಲ್ಲಾ ಕಡೆಯೂ ವರ್ಕ್ ಆಗಲ್ಲ ಮೇಷ್ಟ್ರೇ – ಇದು ಕಡಬದಲ್ಲಿ ಇವತ್ತು ನಡೆದ ಘಟನೆಯ ನಂತರ ಜನ ಕಡಬದಾಚೆಗೂ ಆಡಿಕೊಳ್ಳುತ್ತಿರುವ ಮಾತು.

Leave A Reply

Your email address will not be published.