Ad Widget

ಕರಾವಳಿಯ ಎಲ್ಲಾ ತಾಲೂಕುಗಳು ಸಂಪೂರ್ಣ ಸ್ತಬ್ಧ | ಮಧ್ಯ ರಾತ್ರಿಯ ನೀರವ ಮೌನವನ್ನು ಹೊದ್ದು ಮಲಗಿವೆ ರಸ್ತೆಗಳು !!

14 ದಿನಗಳ ಕರ್ನಾಟಕದ ಟೋಟಲ್ ಲಾಕ್ ಡೌನ್ ಹಿನ್ನೆಲೆಯಲ್ಲಿ ದ.ಕ ಜಿಲ್ಲೆ ಬೆಳಗ್ಗೆ 10 ಗಂಟೆಯ ಬಳಿಕ ಸಂಪೂರ್ಣವಾಗಿ ಸ್ತಬ್ದಗೊಂಡಿದೆ.

ಸದಾ ಗಡಿಬಿಡಿಯಿಂದ ಓಡಾಡುತ್ತಿರುವ ಜನ, ಅಂಗಡಿಗಳ ಮುಂದೆ ಬೇಕಾದ್ದು- ಬೇಡದ್ದು ಕೊಳ್ಳಲು ಮುಗಿ ಬೀಳುತ್ತಿದ್ದ ಜನ, ಗಜಿಬಿಜಿ ಚಿರಿಪಿರಿ – ಇವತ್ತು ಯಾವುದೂ ಇಲ್ಲದೆ ಒಂದು ತರಹದ ನೀರವ ಮೌನ ರಸ್ತೆಯುದ್ದಕ್ಕೂ ಹಾಸಿಕೊಂಡು ಮಲಗಿದೆ.

Ad Widget Ad Widget Ad Widget

ಅಂಗಡಿ ಮುಗ್ಗಟ್ಟು ಹೋಟೆಲುಗಳು ಯಾವುದು ಈಗ ಬಾಗಿಲು ತೆರೆದಿಲ್ಲವಾದ ಕಾರಣ ಬೀದಿನಾಯಿಗಳು ಕೂಡ ತಮ್ಮ ಕೆಲಸಕ್ಕೆ ರಜೆ ಹಾಕಿ ಯಾವುದೋ ಮೂಲೆಯಲ್ಲಿ ಮಲಗಿಬಿಟ್ಟಿದೆ. ಒಂದು ನಾಯಿ ಕೂಡ ರಸ್ತೆಯಲ್ಲಿ ಕಾಣಸಿಗುತ್ತಿಲ್ಲ.
ಸದಾ ತುಂಬಿ ತುಳುಕುತ್ತಿದ್ದ ವಾಹನಗಳು, ಅವಸರವನ್ನು ಪೆಟ್ರೋಲಿನ ಜತೆ ಮಿಕ್ಸ್ ಮಾಡಿಕೊಂಡು ಸದಾ ಧಾವಂತ  ಪಡುತ್ತಿದ್ದ ದ್ವಿಚಕ್ರ ವಾಹನಗಳು, ಏಕಾಏಕಿ ಅಡ್ಡಬರುವ ಆಟೋರಿಕ್ಷಾಗಳು, ರಸ್ತೆಯ ಅರ್ಧ ಜಾಗವನ್ನು ಕಬಳಿಸಿ ಮುನ್ನುಗ್ಗುವ ಬಸ್ಸು ಲಾರಿಗಳು ಇಲ್ಲದ ರಸ್ತೆಗಳು ಪೂರ್ತಿ ಬೆತ್ತಲೆಯಾಗಿ ನಿಂತಿವೆ.

ಸದಾ ಜೀವನೋತ್ಸಾಹದಿಂದ ತುಂಬಿ ತುಳುಕುತ್ತಿದ್ದ ಬಾರುಗಳ ಮುಂದೆ ನೆರೆಯುತ್ತಿದ್ದ ಕ್ರೌಡು ಇವತ್ತು ಮಾಯ. ವೈನ್ ಶಾಪುಗಳ ಮುಂದೆ ಗಂಟೆಗಟ್ಟಲೆ ನಿಂತೇ, ತಮ್ಮಲ್ಲಿ ಇಲ್ಲದ ಉತ್ಸಾಹವನ್ನು ಹೇರಿಕೊಂಡು ದೊಡ್ಡದನಿಯಲ್ಲಿ ಮಾತನಾಡುತ್ತಿದ್ದ ಗೌಜಿ ಇವತ್ತು ಕಾಣೆ.

ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳ ಭಕ್ತರ ತರಹೇವಾರಿ ಪ್ರಾರ್ಥನೆಗಳಿಗೆ ಯಾವತ್ತೂ ಬೇಜಾರು ಮಾಡಿಕೊಳ್ಳದೆ ಸೈಲೆಂಟಾಗಿ ಕಿವಿಯಾಗುತ್ತ ನಿಲ್ಲುತ್ತಿದ್ದ ದೇವರು ಕೂಡ ಇವತ್ತು ರೆಸ್ಟ್ ತೆಗೆದುಕೊಳ್ಳುತ್ತಿದ್ದಾರೆ. ಭಕ್ತರ ಗದ್ದಲವಿಲ್ಲ, ಮಂತ್ರ, ಘೋಷ, ದಿನವಿಡೀ ನಡೆಸುವ ಪೂಜೆ, ಕ್ಯೂ ತಪ್ಪಿಸಿ ಬೇಗ ದೇವರನ್ನು ನೋಡಲು ‘ ಬೈಪಾಸ್ ‘ ಹಾದಿ ಹಿಡಿಯುವ ಭಕ್ತರ ಅವಸರ ಎಲ್ಲವೂ ಬಂದ್ !

ಎಲ್ಲ ವ್ಯಾಪಾರ ಮತ್ತು ವಹಿವಾಟುಗಳ ಸಹಿತ ಜನಜೀವನ ಸಂಪೂರ್ಣ ಸ್ಥಗಿತಗೊಂಡಿತು. ಮಂಗಳೂರು, ಪುತ್ತೂರು, ಸುಳ್ಯ, ಕಡಬ ಬಿಸಿ ರೋಡ್ ವಿಟ್ಲ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಸ್ತಬ್ಧವಾಗಿದೆ.

ಬೆಳಗ್ಗೆ 6ರಿಂದ 10 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ನಿನ್ನೆಯೇ ಹೆಚ್ಚಿನ ಜನರು ಅಗತ್ಯ ವಸ್ತುಗಳನ್ನು ಖರೀದಿಸಿ ಕೊಂಡೊಯ್ದ ಕಾರಣ ಇಂದು ಅಂಗಡಿಗಳ ಮುಂಭಾಗದಲ್ಲಿ ಇಂದಿನ ಜನದಟ್ಟಣೆ ಕಂಡು ಬಂದಿರಲಿಲ್ಲ. ನಿನ್ನೆಯೇ ಜನರು ಇವತ್ತಿಗೆ ಬೇಕಾದ ಎಲ್ಲಾ ರೀತಿಯ ಪ್ರಿಪರೇಷನ್ ಮಾಡಿರುವುದು ಸ್ಪಷ್ಟ. ನಗರದಲ್ಲಿ ಹೋಟೆಲ್‌ಗಳು ಬೆಳಗ್ಗೆ 6ರಿಂದ 10ರ ತನಕ ಮಾತ್ರ ತೆರೆದಿದ್ದು ನಂತರ ಮುಚ್ಚಲ್ಪಟ್ಟಿತು. ಸರಕಾರಿ ಕಚೇರಿ, ಬ್ಯಾಂಕ್, ಅಂಚೆ ಕಚೇರಿ ಮತ್ತಿತರ ಇಲಾಖೆಯ ಕಚೇರಿಗಳು ಎಂದಿನಂತೆ ತೆರೆದಿವೆ. ಆಟೋರಿಕ್ಷಾ, ದ್ವಿಚಕ್ರ ವಾಹನ ಸೇರಿದಂತೆ ವಾಹನಗಳ ಓಡಾಟವು ಬೆಳಗ್ಗಿನ ವೇಳೆಯಲ್ಲಿ ವಿರಳವಾಗಿತ್ತು. 10 ಗಂಟೆಯ ಬಳಿಕ ಸಂಪೂರ್ಣ ನಿಲುಗಡೆಯಾಗಿತ್ತು. 10 ಗಂಟೆಯ ಬಳಿಕ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ತಡೆ ಒಡ್ಡಲಾಗಿತ್ತು.

ಬೆಳ್ತಂಗಡಿಯಲ್ಲಿ ಅನಗತ್ಯವಾಗಿ ತಿರುಗಾಡುತ್ತ ಇರುವ ವಾಹನ ಸವಾರರಿಗೆ ಬೆಳ್ತಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್ ಹಾಗೂ ಸಿಬ್ಬಂದಿಗಳು ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.

ಕಡಬದಲ್ಲಿ ರುಕ್ಮ ನಾಯಕ್ ಅವರು ಕೆಲ ದ್ವಿಚಕ್ರವಾಹನ ಸವಾರರಿಗೆ ದಂಡ ವಿಧಿಸಿದ್ದಾರೆ. ಪುತ್ತೂರು ಮಂಗಳೂರು ಉಡುಪಿ ಮುಂತಾದ ಕೆಲವು ದ್ವಿಚಕ್ರವಾಹನಗಳು ಮೊದಮೊದಲು ಸವಾರಿ ಹೊರಟಿದ್ದಾರೆ. ಆದರೆ ಕಾನೂನು ಪಾಲಕರು ಎಲ್ಲರನ್ನು ಅರ್ಧದಾರಿಯಲ್ಲಿ ತಡೆದು ವಾಪಸ್ ಮನೆಗೆ ಕಳಿಸಿದ್ದಾರೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: