ಕೊರೋನ ನಿರ್ವಹಣೆಯಲ್ಲಿ ರಾಜ್ಯ ಸರಕಾರದ ಗಂಭೀರ ಆಡಳಿತ ವೈಫಲ್ಯ : ಪಾಪ್ಯುಲರ್ ಫ್ರಂಟ್ ಆಕ್ರೋಶ

ಕೊರೋನ 2ನೇ ಅಲೆ ತೀವ್ರವಾಗಿ ಉಲ್ಬಣಿಸುತ್ತಿದ್ದು, ಇದರ ನಿರ್ವಹಣೆಯಲ್ಲಿ ಗಂಭೀರ ಆಡಳಿತ ವೈಫಲ್ಯ ಎದುರಿಸುತ್ತಿರುವ ಬಿಜೆಪಿ ಸರಕಾರದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ನಿರ್ವಹಣೆಯಲ್ಲಿ ಎಡವಿ ಪ್ರಾರಂಭದಿಂದಲೂ ಸುದ್ದಿಯಲ್ಲಿದ್ದ ರಾಜ್ಯ ಸರಕಾರವು, 2ನೇ ಅಲೆಯ ಕುರಿತು ವೈದ್ಯಕೀಯ ತಜ್ಞರು ನೀಡಿದ್ದ ಎಚ್ಚರಿಕೆಯ ಹೊರತಾಗಿಯೂ ಪಾಠ ಕಲಿಯಲು ಮುಂದಾಗಲಿಲ್ಲ. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಭರ್ಜರಿ ಚುನಾವಣಾ ಪ್ರಚಾರಕ್ಕೆ ಅವಕಾಶ ಕಲ್ಪಿಸಿದ ಆಡಳಿತ ವ್ಯವಸ್ಥೆಯು ತನ್ನ ಸ್ವಯಂ ಕೃತಾಪರಾಧವನ್ನು ಇದೀಗ ಜನರ ಮೇಲೆ ಹೇರಲು ಹೊರಟಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೊರೋನ ಹಾವಳಿ ಉಚ್ಛ್ರಾಯ ಸ್ಥಿತಿಯಲ್ಲಿದೆ. ಸೋಂಕಿತರ ಪ್ರಮಾಣ ಮತ್ತು ಸಾವಿನ ಸರಣಿ ಹೆಚ್ಚುತ್ತಿದೆ. ಪರಿಸ್ಥಿತಿ ನಿಯಂತ್ರಣ ತಪ್ಪಿದೆ ಎಂದು ಸ್ವತಃ ಮುಖ್ಯಮಂತ್ರಿಯೇ ಹೇಳಿದ್ದಾರೆ. ಆ ನಡುವೆ, ಆಸ್ಪತ್ರೆಯಲ್ಲಿ ಹಾಸಿಗೆ ಮತ್ತು ಆಮ್ಲಜನಕ, ಲಸಿಕೆ ಕೊರತೆ, ಮೃತದೇಹಗಳ ಅಸಮರ್ಪಕ ನಿರ್ವಹಣೆ ಮೊದಲಾದ ಅವ್ಯವಸ್ಥೆಯ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. ಸರಕಾರ ಕರ್ಫ್ಯೂ ಅಸ್ತ್ರವನ್ನು ಬಳಸುತ್ತಿದ್ದು, ಮೊದಲೇ ಆರ್ಥಿಕ ಪರಿಸ್ಥಿತಿಯಿಂದ ಕಂಗೆಟ್ಟಿರುವ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಸಿ.ಡಿ.ಹಗರಣ, ಉಪ ಚುನಾವಣೆ, ಪರಸ್ಪರ ಕಚ್ಚಾಟದಲ್ಲಿಯೇ ಕಾಲ ಹರಣ ನಡೆಸಿದ ರಾಜ್ಯ ಸರಕಾರ ಇನ್ನಾದರೂ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರಿಗೂ ಆರೋಗ್ಯ ಭದ್ರತೆಯನ್ನು ಖಾತರಿಪಡಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸೋಂಕಿತರಿಗೆ ಸಕಾಲದಲ್ಲಿ ಅಗತ್ಯ ಚಿಕಿತ್ಸೆ ದೊರಕುವಂತಾಗಲು ಸೂಕ್ತ ಕ್ರಮಕೈಗೊಳ್ಳಬೇಕು. ಅತೀ ಅಗತ್ಯವಿರುವ ಆಮ್ಲಜನಕ, ಔಷಧ, ಲಸಿಕೆಯ ಸಮರ್ಪಕ ಪೂರೈಕೆಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಅದೇ ರೀತಿ ಜನರ ಜೀವನ ನಿರ್ವಹಣೆಗೆ ತೊಂದರೆಯಾಗದ ರೀತಿಯಲ್ಲಿ ಕೊರೋನ ನಿಗ್ರಹಕ್ಕೆ ಕ್ರಮ ಕೈಗೊಳ್ಳಬೇಕೆಂದು ನಾಸಿರ್ ಪಾಶ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

Leave A Reply

Your email address will not be published.