ಕೋರೋನಾ ಟ್ರೀಟ್ ಮೆಂಟ್ ವಾರ್ಡ್ ನಲ್ಲೇ ನಡೆಯಿತು ಈ ಮದುವೆ !

ಆ ಯುವಕ ಯುವತಿಯ ಮದುವೆ ಕಳೆದ ವರ್ಷವೇ ನಿಶ್ಚಯವಾಗಿತ್ತು. ಆದರೆ ಕೋವಿಡ್ ಹಾವಳಿಯ ಕಾರಣ ಮುಂದೂಡಲಾಗಿತ್ತು. ಇನ್ನೇನು ಕೋವಿಡ್ ದೂರವಾಯಿತು ಅಂದುಕೊಂಡು ಎರಡೂ ಕುಟುಂಬಗಳವರು ಮತ್ತೆ ಸಂಭ್ರಮದ ಮದುವೆಗೆ ದಿನ ನಿಶ್ಚಯಿಸಿದರು. ಅದಕ್ಕಾಗಿ ಎಲ್ಲಾ ತಯಾರಿ ನಡೆದಿತ್ತು. ಇನ್ನೇನು ಮಾಡುವೆ ಹತ್ರ ಬಂತು ಅನ್ನುವಷ್ಟರಲ್ಲಿ ಮತ್ತೆ ಕೋವಿಡ್ ಹಾವಳಿ.

ಮೊನ್ನೆ ಏಪ್ರಿಲ್ 25 ರಂದು ವರ ಶರತ್ ಹಾಗೂ ಆತನ ತಾಯಿ ಕೊರೋನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಬಾರಿಗೆ ನಿಗದಿಯಾದ ಮದುವೆ ಮತ್ತೆ ಮುಂದೂಡುವ ಪರಿಸ್ಥಿತಿ. ಆದರೆ ಮದುವೆಯನ್ನು ಮತ್ತೆ ಮುಂದೂಡುವುದು ಸರಿಯಲ್ಲ ಎಂದುಕೊಂಡ ಎರಡೂ ಕುಟುಂಬಗಳು ಚರ್ಚಿಸಿ ನಿಗದಿತ ದಿನ ಮದುವೆ ಮಾಡಲೇಬೇಕೆಂದು ತೀರ್ಮಾನಿಸಿದ್ದಾರೆ.

ನಂತರ ಜಿಲ್ಲಾಧಿಕಾರಿಯಿಂದ ಆಸ್ಪತ್ರೆಯಲ್ಲಿ ಮದುವೆ ನಡೆಸಲು ಅನುಮತಿ ಪಡೆದು ಮದುವೆ ನಡೆಸಿಯೇ ಬಿಟ್ಟಿದ್ದಾರೆ.

ಕೇರಳದ ಆಲಪ್ಪುಳ ಜಿಲ್ಲೆಯಲ್ಲಿರುವ ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲೇ ಮದುವೆ ನಡೆದು ಹೋಯಿತು. ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಬಂದ ವಧು ಅಭಿರಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ನನ್ನು ವರಿಸಿದ್ದಾರೆ. ಹಾರ ಬದಲಾಯಿಸಿಕೊಳ್ಳುವ ಮೂಲಕ ಅವರಿಬ್ಬರೂ ಮದುವೆಯಾಗಿದ್ದಾರೆ.

Leave A Reply

Your email address will not be published.