ಪಡುಮಲೆ ಕ್ಷೇತ್ರದಲ್ಲಿ ಆರಾಧನೆ ಆರಂಭಗೊಳ್ಳುತ್ತಿದ್ದಂತೆ ನಾಗ ಪ್ರತ್ಯಕ್ಷ..500 ವರ್ಷದಿಂದ ಪಡುಮಲೆ ಸಾನಿಧ್ಯದಲ್ಲಿ ಸ್ಥಗಿಗೊಂಡಿದ್ದ ನಾಗಬೆರ್ಮೆರ್, ಚಿತ್ರಕೂಟ ಸಂಕಲ್ಪ, ರಕ್ತೇಶ್ವರೀ, ದೇಯಿಬೈದ್ಯೇತಿಯ ಸಮಾಧಿ ಸ್ಥಳದಲ್ಲಿ ಏ.24ರಿಂದ ಪೂಜಾರಾಂಭ

500 ವರ್ಷದಿಂದ ಪಡುಮಲೆ ಸಾನಿಧ್ಯದಲ್ಲಿ ನಿಂತಿದ್ದ ಪೂಜಾ ವಿಧಿ ವಿಧಾನಗಳಿಗೆ ಏ.24ರ ಮೀನ ಸುಮುಹೂರ್ತದಲ್ಲಿ ಕೋವೀಡ್ ನಿಯಮಾನುಸಾರ ಹಾಗೂ ಸೀಮಿತ ಭಕ್ತರ ಸಮ್ಮುಖದಲ್ಲಿ ಚಾಲನೆ ದೊರೆಯಿತು.

ಆದರೆ ಕುಂಬಳೆ ಸೀಮೆ ಅರ್ಚಕರ ವೈಭವದ ವೇದಗೋಷ ಆರಂಭಗೊಳ್ಳುತ್ತಿದ್ದಂತೆ ಸಾನಿಧ್ಯದಡೆಗೆ ನಾಗಗಳ ಆಗಮವಾಗುತ್ತಿದ್ದು, ಭಕ್ತರಲ್ಲಿ ಭಯ ಭಕ್ತಿ ಹಾಗೂ ಅಚ್ಚರಿ ಮೂಡಿಸಿದೆ.


ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಾನ ಹಾಗೂ ಮೂಲಸ್ಥಾನದಲ್ಲಿ ನಾಗಬೆರ್ಮೆರ ಗುಡಿ, ನಾಗ ಸನ್ನಿ, ರಕ್ತೇಶ್ವರಿ, ತೀರ್ಥಬಾವಿ ಹಾಗೂ ದೇಯಿ ಬೈದೆತಿ ಸಾನ್ನಿಧ್ಯದ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಏ.22 ರಿಂದ 24 ರ ವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ನಡೆಸಲು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ತೀರ್ಮಾನಿಸಿದ್ದು, ಕೋವೀಡ್ ನಿಯಮದಿಂದ ಕಾರ್ಯಕ್ರಮ ಮುಂದೂಡಲು ಚಿಂತನೆ ನಡೆಸಲಾಗಿತ್ತು. ಆದರೆ 500 ವರ್ಷದಿಂದ ಪಡುಮಲೆ ಸಾನಿಧ್ಯದಲ್ಲಿ ನಿಂತಿದ್ದ ಆರಾಧನೆ ಆರಂಭಕ್ಕೆ ಏ.24ರ ಮೀನ ಸುಮುಹೂರ್ತವೇ ಶ್ರೇಷ್ಟ ಕಾಲ. ಒಂದು ವೇಳೆ ಈ ಕಾಲಗಟ್ಟದಲ್ಲಿ ಪಡುಮಲೆ ಸಾನಿಧ್ಯದಲ್ಲಿ ಆರಾಧನಾ ಕ್ರಮಗಳು ಆರಂಭಗೊಳ್ಳದಿದ್ದರೆ ಮುಂದಿನ 5-6 ಶತಮಾನಗಳವರೆಗೆ ಮತ್ತೆ ಕಾಯಬೇಕಿದೆ ಎಂಬ ಮಾತು ಪ್ರಶ್ನಾ ಚಿಂತನೆಯಲ್ಲಿ ಮೂಡಿ ಬಂತು.


ಕೋಟಿಚಿನ್ನಯರ ಆರಾಧನ ಸ್ಥಳ ಅಭಿವೃದ್ಧಿ


ದೈವಜ್ಞರಿಂದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ತಲೆಯಲ್ಲಿ ನಾಗಾಭರಣದ ಕಿರೀಟವನ್ನು ಧರಿಸಿ ಅಶ್ವಾರೂಢ ಭಂಗಿಯಲ್ಲಿರುವ, ಪ್ರತೀ ಕೋಟಿಚೆನ್ನಯ ಗರಡಿಗಳಲ್ಲಿ ಆರಾಧನೆಯಾಗುತ್ತಿರುವ (ಬೆರ್ಮೆರೆ ಗುಂಡ) ಕೋಟಿಚೆನ್ನಯರ ಕುಲದೇವರಾದ ನಾಗಬೆರ್ಮೆರ್ ಅವರ ಶಿಲಾಮಯವಾದ ಮೂಲಸ್ಥಾನ, ಜೊತೆಗೆ ಬಲಬದಿಯಲ್ಲಿ ಚಿತ್ರಕೂಟ ಸಂಕಲ್ಪದಲ್ಲಿ ನಾಗಬ್ರಹ್ಮ, ನಾಗಕನ್ನಿಕೆ,ನಾಗರಾಜ ಮತ್ತು ನಾಗ ಸನ್ನಿಧಿ ಮತ್ತು ಎಡಬದಿಯಲ್ಲಿ ರಕ್ತೇಶ್ವರೀ ದೈವದ ಸ್ಥಾನ ನಿರ್ಮಾಣವಾಗಿದೆ. ಮುಂಭಾಗದಲ್ಲಿ ಅರಮನೆ ವತಿಯಿಂದ ಅಂತ್ಯಸಂಸ್ಕಾರಗೊಂಡ ದೇಯಿಬೈದ್ಯೇತಿಯ ಸಮಾಧಿ ಸ್ಥಳ, ದೈವೀಶಕ್ತಿಯ ನಾಗಗಳು ನೀರು ಕುಡಿಯುವ ಪವಿತ್ರ ತೀರ್ಥ ಸ್ಥಳ ನವೀಕರಣಗೊಂಡಿದೆ.
ಕ್ಷೇತ್ರದ ತಂತ್ರಿಗಳವರಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಏ.24 ಶನಿವಾರ ಬೆಳಗ್ಗೆ 3 ಗಂಟೆಗೆ ಅಲ್ಪ ಪ್ರಾಸಾದ ಶುದ್ಧಿ, ಪ್ರಾಸಾದ ಪ್ರತಿಷ್ಠೆ, 3.58 ರಿಂದ 4.21 ರ ಮೀನ ಸುಮುಹೂರ್ತದಲ್ಲಿ ಪ್ರತಿಷ್ಠೆ ಜೀವಕಲಶಾಭಿಷೇಕ, ಮಹಾಪೂಜೆ, ಗಣಪತಿ ಹವನ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ ಸೇರಿದಂತೆ ವಿವಿಧ ಪೂಜಾವಿಧಿವಿಧಾನ ನಡೆಯಿತು.

ಪೂಜಾರಂಭಕ್ಕೆ ಮುನ್ನ ನಾಗಗಳ ದರುಶನ


500 ವರ್ಷಗಳಹಿಂದೆಯೇ ಪಡುಮಲೆಯಲ್ಲಿ ನಾಗಾರಾಧನ ಕ್ಷೇತ್ರವಿತ್ತು. ಸಾವಿರಾರು ನಾಗಗಳು ಜನರಿಗೆ ದರುಷನ ನೀಡುತ್ತಿದ್ದವು ಎಂಬ ಪ್ರತೀತಿ ಇದೆ. ಕಾಲಾನಂತರ ಪೂಜಾ ವಿಧಿವಿಧಾನ ನಿಂತು ಹೋಗಿ ಕ್ಷೇತ್ರ ಪಾಳುಬಿದ್ದಿತ್ತು. ಈ ಹಿಂದೆ ಪಡುಮಲೆಯಲ್ಲಿ ನಡೆದ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಪಡುಮಲೆಯಲ್ಲಿ ಕೋಟಿಚೆನ್ನಯರು ಆರಾಧಿಸಿಕೊಂಡು ಬರುತ್ತಿದ್ದ ನಾಗಬ್ರಹ್ಮ ನಾಗರಾಜ ನಾಗಯಕ್ಷಿಣಿ ಮತ್ತು ನಾಗ ಕೆತ್ತನೆಗಳಿರುವ ಅದ್ಭುತವಾದ ನಾಗಪ್ರತಿಮೆಗಳು ಪತ್ತೆಯಾದವು. ಆ ಸಂದರ್ಭಕ್ಕೆ ಅಲ್ಲಿ ಸಾಕ್ಷಾತ್ ನಾಗರ ಹಾವೇ ಗೋಚರಿಸಿ ಭಕ್ತರಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರೇರೇಪಿಸಿತು. ಕ್ಷೇತ್ರದ ತಂತ್ರಿಗಳವರಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರ ಪ್ರಕಾರ ಸಂಪೂರ್ಣವಾಗಿ ಪಡುಮಲೆಯಲ್ಲಿರುವ ಅಪೂರ್ವವಾದ ನಾಗನ ಪ್ರತಿಮೆಗಳು ಕುಂಬ್ಳೆ ಸೀಮೆಯಲ್ಲಿಯೇ ಬೇರೆ ಎಲ್ಲಿಯೂ ಕಂಡುಬರುತ್ತಿಲ್ಲ. ಅತೀ ಪುರಾತನ ವಿಶಿಷ್ಟ ಹಾಗೂ ಪವಿತ್ರವಾದ ಈ ನಾಗಸ್ಥಾನ ಸೀಮೆಗೇ ಮೂಲ ನಾಗಸ್ಥಾನವಾಗಿದೆ ಎಂದರು.


ಸುಮಾರು 40 ವರ್ಷಗಳ ಹಿಂದೆ ಮಂಗಳೂರಿನ ಹಂಪನ್‌ಕಟ್ಟೆ ಉದ್ಯಮಿ ಜೆ.ವಿ ಸೀತಾರಾಮ್ ಅವರು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ನಾಗನ ನೆಲೆಯನ್ನು ಅಭಿವೃದ್ಧಿ ಪಡಿಸಲು ಮುಂದಾದರು. ಆದರೆ ಸುತ್ತು ಮುತ್ತಲಿನಲ್ಲಿ ನಾಗರ ಹಾವುಗಳ ಬರುವಿಕೆ ಮತ್ತು ಇರುವಿಕೆಯಿಂದ ಕೆಲಸಗಾರರು ಬೆದರಿ ಕ್ಷೇತ್ರ ನಿರ್ಮಾಣ ಸ್ಥಗಿತಗೊಂಡಿತು. ಏ.23ರ ಸಾಯಂಕಾಲ ಸಾನಿಧ್ಯದ ಪೂಜಾಕೈಂಕರ್ಯ ನಡೆಯುತ್ತಿರುವ ವೇಳೆ ನಾಗ, ಕೃಷ್ಣಸರ್ಪ, ಎಲನಾಗಗಳು ಅಲ್ಲಲ್ಲಿ ಗೋಚರಿಸಿ ಭಕ್ತರಲ್ಲಿ ಅಚ್ಚರಿ ಮೂಡಿಸಿತು. ಈ ವೇಳೆ ಸಾನಿಧ್ಯದ ಸುತ್ತಮುತ್ತಲಿನಲ್ಲಿ ಓಡಾಡುವ ಭಕ್ತರಿಗೂ ಹಲವು ನಾಗಗಳು ದರುಷನ ನೀಡಿರುವುದೂ ವಿಶೇಷ. 400 ವರ್ಷಗಳ ಹಿಂದೆ ಸತ್ಯಧರ್ಮ ನ್ಯಾಯಗಳಿಂದ ಕೂಡಿದ್ದ ಪಡುಮಲೆ ರಾಜ್ಯದ ಜನರಿಗೆ ನಾಗಗಳು ದರುಷನ ನೀಡುತ್ತಿದ್ದಂತೆ ಪಡುಮಲೆ ಕ್ಷೇತ್ರದಲ್ಲಿ ಆರಾಧನೆ ಆರಂಭಗೊಳ್ಳುತ್ತಿದ್ದಂತೆ ನಾಗ ಪ್ರತ್ಯಕ್ಷವಾಗಿ ಜನರಿಗೆ ಅಭಯ ನೀಡುತ್ತಿರುವುದು ವಿಶೇಷ.

Leave A Reply

Your email address will not be published.