ಮುರುಡೇಶ್ವರ ಕಡಲ ತೀರದಲ್ಲಿ ಮೀನುಗಾರನಿಗೆ ಸಿಕ್ಕಿತು ಅತ್ಯಂತ ಬೆಲೆಬಾಳುವ ತಿಮಿಂಗಿಲ ವಾಂತಿ..!

ಭಟ್ಕಳ (ಏ.25): ಮುರ್ಡೇಶ್ವರ ಕಡಲ ತೀರದಲ್ಲಿ ಬೆಲೆಬಾಳುವ ಮತ್ತು ಅತ್ಯಂತ ಅಪರೂಪವಾಗಿ ಸಿಗುವ ತಿಮಿಂಗಲದ ವಾಂತಿ (ಅಂಬೆಗ್ರಿಸ್‌) ಮೀನುಗಾರನೊಬ್ಬನಿಗೆ ಸಿಕ್ಕಿದೆ.

ಅದನ್ನು ಇದೀಗ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸಿಕ್ಕಿರುವ ತಿಮಿಂಗಲದ ವಾಂತಿ ಸುಮಾರು1 ಕೆಜಿ ತೂಕ ಹೊಂದಿದೆ. ಇದು ಕಲ್ಲಿನಾಕಾರದಲ್ಲಿದೆ. ಇದನ್ನು ಮೀನುಗಾರ ಮನೆಗೆ ತಂದು ತಜ್ಞರ ಮೂಲಕ ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ಗೊತ್ತಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಹೊನ್ನಾವರ ವಿಭಾಗದ ಅರಣ್ಯಾಧಿಕಾರಿಗಳು, ಮುರ್ಡೇಶ್ವರ ಕಡಲ ತೀರದಲ್ಲಿ ಸಿಕ್ಕಿದ್ದು ತಿಮಿಂಗಲದ ವಾಂತಿಯಾಗಿದೆ. ಆದರೆ, ಸ್ಪೆರ್ಮವೇಲ್‌ ಜಾತಿಯ ತಿಮಿಂಗಲದ ವಾಂತಿ ಅಂಬೆಗ್ರಿಸ್‌ಗೆ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದೆ. ಅದು ಸುಗಂಧ ದ್ರವ್ಯಕ್ಕೆ ಬಳಕೆಯಾಗುತ್ತದೆ. ಆದರೆ, ಇದು ಸ್ಪೆರ್ಮವೇಲ್‌ನ ಜಾತಿಯ ತಿಮಿಂಗಲದ ವಾಂತಿ ಎನ್ನುವುದು ಇನ್ನೂ ಖಚಿತಪಟ್ಟಿಲ್ಲ ಎಂದು ತಿಳಿಸಿದ್ದಾರೆ.

ಏನಿದು ತಿಮಿಂಗಿಲ ವಾಂತಿ ?

ತಿಮಿಂಗಿಲಗಳು ಮಣಕಿ (ಸ್ಕ್ವಿಡ್), ಕಪ್ಪೆ ಬೊಂಡಾಸ್ (ಕಟಲ್ ಫಿಶ್) ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ. ಕೆಲವೊಮ್ಮೆ ಈ ಮೀನುಗಳ ಗಟ್ಟಿಯಾದ ಎಲುಬು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೆ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರಹಾಕುತ್ತದೆ.

ಇವು ಮೇಣದಂತಿದ್ದು, ಈ ರೀತಿ ತೇಲುತ್ತಿರುವ ಮೇಣದಂತಹ ತಿಮಿಂಗಿಲ ವಾಂತಿಯು ಮೊದಲಿಗೆ ಕೆಟ್ಟ ವಾಸನೆ ಸೂಸುತ್ತವೆ. ಮೇಣದಂತಹ ಈ ವಸ್ತುವು ಮೊದಲು ತೇಲುತ್ತಿರುತ್ತದೆ. ನಂತರದಲ್ಲಿ ಘನರೂಪಕ್ಕೆ ಬಂದಾಗ ಸುವಾಸನೆ ಬೀರುತ್ತದೆ. ಇದನ್ನು ಸುಗಂಧ ದ್ರವ್ಯ ಉದ್ದಿಮೆಗಳಲ್ಲಿ ಬಳಸಲಾಗುತ್ತದೆ. ಇದನ್ನು ಅಂಬರ್‌ಗ್ರೀಸ್ ಎಂದೂ ಸಹ ಕರೆಯಲಾಗುತ್ತದೆ.

ಈ ‘ ಅಂಬರ್‌ಗ್ರೀಸ್ ‘ ವಿಶೇಷವೆಂದರೆ , ಇದು ಸುಗಂಧ ದ್ರವ್ಯದ ಸುವಾಸನೆಯ ಅವಧಿಯನ್ನು ದುಪ್ಪಟ್ಟುಗೊಳಿಸುತ್ತದೆ. ಹೀಗಾಗಿ ಸೆಂಟ್ ಉದ್ಯಮದಲ್ಲಿ ಇದಕ್ಕೆ ಭಾರಿ ಬೇಡಿಕೆಯಿದೆ. ತಜ್ಞರ ಪ್ರಕಾರ ಬಲು ಅಪರೂಪಕ್ಕೆ ಒಂದು ಬಾರಿ ಮಾತ್ರ ತಿಮಿಂಗಿಲಗಳು ವಾಂತಿ ಮಾಡಿಕೊಳ್ಳುತ್ತದೆ. ಒಂದು ತಿಮಿಂಗಿಲ ಒಂದು ಕೆಜಿ ಇಂದ ಹತ್ತು ಕೆಜಿಗೂ ಹೆಚ್ಚು ವಾಂತಿ ಮಾಡಿಕೊಳ್ಳುತ್ತದೆ.

Leave A Reply

Your email address will not be published.