ದ.ಕ.ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ: ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

ದ.ಕ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಈಗಿನ ಪರಿಸ್ಥಿತಿಯಲ್ಲಿ ಮುಂದಿನ 15 ದಿನಗಳವರೆಗೆ ಎಲ್ಲವನ್ನೂ ಸಮರ್ಪಕವಾಗಿ ಎದುರಿಸಲು ದ.ಕ. ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಾರ್ವಜನಿಕರಿಗೆ ವಿಶ್ವಾಸ ನೀಡಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಸರಕಾರದ ಆದೇಶಗಳನ್ನು ಪಾಲಿಸಿಕೊಂಡು ಕಠಿಣ ಪರಿಸ್ಥಿತಿಯ ಲಾಕ್‌ಡೌನ್‌ಗೆ ಅವಕಾಶ ನೀಡದಂತೆ ಆಡಳಿತದ ಜತೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಕೊರೋನ ಪಾಸಿಟಿವ್ ಪ್ರಕರಣಗಳು ಈಗಿನ ಪರಿಸ್ಥಿತಿಯಲ್ಲಿ ಮುಂದುವರಿದರೆ 15 ದಿನಗಳ ಬಳಿಕ ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಸೇರಿದಂತೆ ಬಿಕ್ಕಟ್ಟು ಎದುರಾಗಬಹುದು. ಆದರೆ ಅವೆಲ್ಲವನ್ನೂ ಎದುರಿಸಲು ಈಗಾಗಲೇ ಜಿಲ್ಲಾಡಳಿತ ಮುಂಜಾಗೃತಾ ಕ್ರಮಗಳನ್ನು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಗರದ ಎಂಸಿಎಫ್, ಎನ್‌ಐಟಿಕೆಯಲ್ಲಿಯೂ ಹಾಸಿಗೆಗಳನ್ನು ಮೀಸಲಿಡಲು, ಪ್ರತಿ ತಾಲೂಕಿನಲ್ಲೂ ಪ್ರತ್ಯೇಕ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲು ತಹಶೀಲ್ದಾರರಿಗೆ ಜಾಗ ಗುರುತಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಚಿಕಿತ್ಸೆಗೆ 31 ಆಸ್ಪತ್ರೆಗಳ ಜತೆಗೆ ಜಿಲ್ಲೆಯಲ್ಲಿ 124 ನರ್ಸಿಂಗ್ ಹೋಂಗಳು ಲಭ್ಯವಿವೆ. ಇದರಲ್ಲಿ 74 ಮಂಗಳೂರಿನಲ್ಲೇ ಇವೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 5000 ಬೆಡ್‌ಗಳು ಲಭ್ಯವಿದೆ. ಅದರಲ್ಲಿ 3800 ಜನರಲ್ ಬೆಡ್‌ಗಳು, 300 ಐಸಿಯು, ವೆನ್‌ಲಾಕ್ ಆಸ್ಪತ್ರೆಯಲ್ಲಿ 274 ಆಕ್ಸಿಜನ್ ಬೆಡ್‌ಗಳು, 70 ವೆಂಟಿಲೇಟರ್‌ಗಳು ಲಭ್ಯವಿದೆ. ಜಿಲ್ಲೆಗೆ ಆರೋಗ್ಯ ಸಮಸ್ಯೆಗಾಗಿ ನೆರೆಯ ಜಿಲ್ಲೆಗಳಿಂದಲೂ ರೋಗಿಗಳು ಬರುವುದರಿಂದ ಮುಂದೆ ಬೆಡ್‌ಗಳ ಕೊರತೆ ಕಾಣಿಸಿಕೊಳ್ಳಬಹುದು. ಆರೋಗ್ಯ ಸೇವೆಯನ್ನು ಇತರ ಜಿಲ್ಲೆಯವರಿಗೆ ನಿರಾಕರಿಸಲು ಸಾಧ್ಯವಿಲ್ಲ. ಹಾಗಿದ್ದರೂ ದ.ಕ.ಜಿಲ್ಲೆಯವರಿಗೆ ಆದ್ಯತೆ ನೀಡಲಾಗುವುದು.


ಈ ನಡುವೆ ಹೊಟೇಲ್ ಹಾಗೂ ಆಸ್ಪತ್ರೆ ಅಸೋಸಿಯೇಶನ್‌ನವರ ಜತೆ ಮಾತುಕತೆ ನಡೆಸಲಾಗುವುದು. ಅವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಡ್, ಆಕ್ಸಿಜನ್‌ಗೆ ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು. ವೆನ್‌ಲಾಕ್ ಮೆಡಿಕಲ್ ಬ್ಲಾಕ್ ಸಂಪೂರ್ಣವಾಗಿ ಕೋವಿಡ್‌ಗೆ ಮೀಸಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್, ಡಿಸಿಪಿಗಳಾದ ಹರಿರಾಂ, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.

ಜನಸಾಮಾನ್ಯರು ಯಾವುದೇ ರೀತಿಯಲ್ಲಿ ಗಾಬರಿಗೊಳ್ಳುವ ಅಗತ್ಯವಿಲ್ಲ. ಆದರೆ ಕೋವಿಡ್‌ಗೆ ಸಂಬಂಧಿಸಿದ ಯಾವುದೇ ರೀತಿಯ ಸಣ್ಣ ಪುಟ್ಟ ಗುಣಲಕ್ಷಣಕಂಡು ಬಂದಾಗಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ. ಇದರಿಂದ ಭಾರೀ ಅನಾಹುತವನ್ನು ತಪ್ಪಿಸಲು ಸಾಧ್ಯವಾಗಲಿದೆ. ಇದಕ್ಕೆ ಸಾಮುದಾಯಿಕ ಪಾಲ್ಗೊಳ್ಳುವಿಕೆ ಅತೀ ಅಗತ್ಯ. ಅತ್ಯಂತ ವೇಗವಾಗಿ ರೋಗ ಹರಡುವವರಿಂದ ದೂರವಿರಬೇಕಾದರೆ (ಯಾವುದೇ ರೋಗ ಲಕ್ಷಣಗಳಿಲ್ಲದ ಕೋವಿಡ್ ಸೋಂಕಿತರು) ಸುರಕ್ಷಿತ ಅಂತರ, ಮಾಸ್ಕ್ ಕಡ್ಡಾಯ ಅತೀ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದರು.

ರೆಮ್‌ ಡಿಸಿವರ್ ವೆನ್‌ಲಾಕ್ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಖಾಸಗಿ ಆಸ್ಪತ್ರೆಯಲ್ಲಿ ಅಲಭ್ಯತೆ ಬಗ್ಗೆ ಮಾಹಿತಿ ದೊರಕಿದ್ದು, ಅವರಿಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಆಸ್ಪತ್ರೆಯಲ್ಲಿ ಇರಿಸಿಕೊಂಡು ಚಿಕಿತ್ಸೆ ಕೊಡುವಷ್ಟು ರೋಗ ಲಕ್ಷಣವಿಲ್ಲದ ಹಾಗೂ

ಮನೆಯಲ್ಲಿ ವ್ಯವಸ್ಥೆ ಇಲ್ಲದ ರೋಗಿಗಳಿಗೆ ಕೋವಿಡ್ ಸೆಂಟರ್‌ಗಳ ಮೂಲಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

Leave A Reply

Your email address will not be published.