ಲಾಕ್ ಡೌನ್ ಭಯದಲ್ಲಿ ಡ್ರಿಂಕ್ಸ್ ಗೆ ಮುಗಿಬಿದ್ದ ಜನ | ಕೇವಲ ಅರ್ಧ ದಿನದಲ್ಲಿ ಮದ್ಯ ಮಾರಾಟದಲ್ಲಿ 100 % ದಾಖಲೆಯ ಹೆಚ್ಚಳ !

ರಾಜ್ಯದಲ್ಲಿ ಮತ್ತೆ ಪೂರ್ತಿ ಲಾಕ್‌ಡೌನ್‌ ಭೀತಿಯಿಂದಾಗಿ ಅರ್ಧ ದಿನದಲ್ಲೇ ಬರೋಬ್ಬರಿ 117.28 ಕೋಟಿ ರೂ. ಮದ್ಯ ವಹಿವಾಟು ನಡೆದಿದೆ. ಇದು ಸಾಧಾರಣ ದಿನದ ವ್ಯವಹಾರದ 100% ಕ್ಕಿಂತಲೂ ಅಧಿಕ ಹೆಚ್ಚಳವಾಗಿದೆ.

ಕೊರೋನಾ ನಿಯಂತ್ರಿಸಲು ಲಾಕ್ ಡೌನ್ ಜಾರಿ ಆಗುವ ಸಂಭವವಿದೆ ಎಂಬ ವದಂತಿ, ಆತಂಕ ಎಲ್ಲಾ ಜನರಲ್ಲೂ ಹಬ್ಬಿತ್ತು. ಅದರಲ್ಲೂ ಮದ್ಯದ ಮಲ್ಲರು ಕಳೆದ ಸಲದಂತೆ ಈ ಬಾರಿ ಪೇಚಿಗೆ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶ ಬರಿಸಿಕೊಳ್ಳಲು ರೆಡಿ ಇಲ್ಲ.
‘ಮದ್ಯ’ಮ ವರ್ಗ ಈ ಬಾರಿ ಈ ವಿಷಯದಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಅಲ್ಲದೆ, ಬಾರ್ ಮತ್ತು ವೈನ್ ಶಾಪಿನಲ್ಲಿ 90 ಮಿಲಿ ಸೀಷೆ, ಕ್ವಾರ್ಟರ್ ಬಾಟಲ್ ಗಳ ಮಾರಾಟದಲ್ಲಿ ಕುಸಿತ ಕಂಡಿದ್ದು ಫುಲ್ ಬಾಟಲ್ ಮತ್ತು ಬೀರುಗಳು ಕ್ರೇಟ್ ಗಟ್ಟಲೆ ಮಾರಾಟ ಆಗುತ್ತಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ನಮಗೆ ದೊರೆತ ಮಾಹಿತಿಯ ಪ್ರಕಾರ 45 ವರ್ಷಕ್ಕಿಂತ ಮೇಲ್ಪಟ್ಟ ಪ್ರಾಯದ ವ್ಯಕ್ತಿಗಳು ಕೋರೋನಾ ಲಸಿಕೆ ಹಾಕಿಕೊಂಡ ಕಾರಣ, ಹೆಚ್ಚಿನವರು ಮದ್ಯಸೇವನೆ ಮಾಡಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಕೋರೋನಾ ಲಸಿಕೆಯ ಪರಿಣಾಮವನ್ನು ಮದ್ಯವು ಕುಗ್ಗಿಸುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ‘ಇನ್ನೊಂದಷ್ಟು ದಿನ ಕಾಯೋಣ ‘ ಎಂಬ ಭಾವನೆ ಹೆಚ್ಚಿನವರಲ್ಲಿ ಕಂಡುಬರುತ್ತಿದೆ.

ಪಾನಪ್ರಿಯರು ಮದ್ಯದಂಗಡಿಗಳಿಗೆ ತೆರಳ ಭರ್ಜರಿ ಮಾಲು ಸಂಗ್ರಹಿಸಿಕೊಂಡಿದ್ದಾರೆ. ಮಂಗಳವಾರ ಅರ್ಧ ದಿನದಲ್ಲೇ 117.28 ಕೋಟಿ ರೂ. ಮೌಲ್ಯದ 2.19 ಲಕ್ಷ ಬಾಕ್ಸ್ ಐಎಂಎಲ್ ಹಾಗೂ ಒಂದು ಲಕ್ಷಕ್ಕಿಂತಲೂ ಬಾಕ್ಸ್ ಬಿಯರ್ ಮಾರಾಟವಾಗಿದೆ.
ರಾಜ್ಯಾದ್ಯಂತ ಬುಧವಾರ ವಾರಾಂತ್ಯ ಬಂದ್ ಹಾಗೂ ನೈಟ್ ಕರ್ಪ್ಯೂ ಅವಧಿ ವಿಸ್ತರಣೆಯ ಹಿನ್ನೆಲೆಯಲ್ಲಿ 92 ಕೋಟಿ ರೂ. ಮೌಲ್ಯದ 2.36 ಲಕ್ಷ ಬಾಕ್ಸ್ ಐಎಂಎಲ್
ಹಾಗೂ 94 ಸಾವಿರ ಬಾಕ್ಸ್ ಬಿಯರ್‌ ಮಾರಾಟವಾಗಿದೆ ಎಂದು ತಿಳಿದುಬಂದಿದೆ.

ಮದ್ಯದಂಗಡಿಗಳಲ್ಲಿ ಪಾರ್ಸೆಲ್‌ಗಷ್ಟೇ ಅವಕಾಶ ನೀಡಲಾದ ಕಾರಣ ಮೇಲ್ನೋಟಕ್ಕೆ ಅಷ್ಟೇನೂ ರಶ್ ಕಂಡುಬರುತ್ತಿಲ್ಲ. ಆದರೆ ಭಾರಿ ಪ್ರಮಾಣದ ವ್ಯಾಪಾರ ಕುದುರುತ್ತಿದೆ. ಸರ್ಕಾರಕ್ಕೆ ಈ ‘ಎಕಾನಮಿ ವಾರಿಯರ್ಸ್ ‘ ಭರ್ಜರಿ ಆದಾಯ ತರುತ್ತಿದ್ದಾರೆ.

Leave A Reply

Your email address will not be published.