ಜಮೀನು ಕಳೆದುಕೊಂಡವರಿಗೆ ಪರಿಹಾರ ವಿಳಂಬ: ಸರಕಾರಿ ಕಚೇರಿಯ ಪೀಠೋಪಕರಣ ಜಪ್ತಿಗೆ ಆದೇಶಿಸಿದ ಕೋರ್ಟ್

ಜಮೀನು ಕಳೆದುಕೊಂಡವರಿಗೆ ಪರಿಹಾರ ನೀಡಲು ರಾಜ್ಯ ಸರಕಾರದಿಂದ ವಿಳಂಬ ಧೋರಣೆ ಹಿನ್ನೆಲೆಯಲ್ಲಿ ಬೆಳಗಾವಿ ಉಪವಿಭಾಗಧಿಕಾರಿ ಕಚೇರಿಯ ಪೀಠೋಪಕರಣ ಜಪ್ತಿಗೆ ಬೆಳಗಾವಿಯ 4ನೆ ಹೆಚ್ಚುವರಿ ಜೆಎಂಎಫ್‍ಸಿ ಕೋರ್ಟ್ ಆದೇಶ ಹೊರಡಿಸಿದೆ.

ಸಾಂಬ್ರಾ ಬಳಿ ಏರ್‍ಫೋರ್ಸ್ ಅಧಿಕಾರಿಗಳ ಕ್ವಾರ್ಟರ್ಸ್ ನಿರ್ಮಿಸಲು ಭೂಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಿಬ್ಬಂದಿ ಎಸಿ ಕಚೇರಿಯ ಪೀಠೋಪಕರಣ, ಕಂಪ್ಯೂಟರ್ ಗಳನ್ನು ಜಪ್ತಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದ 30 ರೈತರಿಂದ 35 ಎಕರೆ ಜಮೀನು ಭೂಸ್ವಾಧೀನ ಪಡಿಸಿಕೊಂಡಿತ್ತು. ಬಳಿಕ ಬಡ್ಡಿ ಸಹಿತ ರೈತರಿಗೆ ಸಿಗಬೇಕಿದ್ದ 5 ಕೋಟಿ ರೂಪಾಯಿಗೂ ಹೆಚ್ಚು ಪರಿಹಾರವನ್ನು ರಾಜ್ಯ ಮತ್ತು ಕೇಂದ್ರ ಸರಕಾರ ನೀಡಬೇಕಿತ್ತು.

ಆದರೆ ಈ ಬಗ್ಗೆ ಸರಕಾರ ಗಮನ ಹರಿಸಿಲ್ಲ. ಹೀಗಾಗಿ, ವಿಳಂಬ ಧೋರಣೆ ಖಂಡಿಸಿ ರೈತರು ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಪರಿಹಾರ ನೀಡದ ಎಸಿ ಕಚೇರಿ ಪೀಠೋಪಕರಣ ಜಪ್ತಿಗೆ ನ್ಯಾಯಾಲಯದ ಆದೇಶ ಹೊರಡಿಸಿದ್ದು, ನ್ಯಾಯಾಲಯ ಆದೇಶದಂತೆ ಪೀಠೋಪಕರಣ, ಕಂಪ್ಯೂಟರ್ ಜಪ್ತಿ ಮಾಡಲಾಗಿದೆ.

Leave A Reply

Your email address will not be published.