ಬೆಂಗಳೂರಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣ- ಡಾ ಕೆ ಸುಧಾಕರ್

ಕೋವಿಡ್ ಸೋಂಕಿನ ಪರಿಣಾಮ, ಬೆಂಗಳೂರಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಸಚಿವ ಡಾ ಕೆ ಸುಧಾಕರ್‌ ತಿಳಿಸಿದ್ದಾರೆ.

ಆರೋಗ್ಯ ತುರ್ತಿನ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರ ನಿರ್ದೇಶನದಂತೆ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.

ಈ ಕುರಿತು ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಮುಖ್ಯಸ್ಥರ ಬಳಿ ಅಗತ್ಯ ಚರ್ಚೆಗಳನ್ನು ಸರ್ಕಾರ ನಡೆಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳಡಿ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಬೆಂಗಳೂರಿನಲ್ಲಿನ 13 ವೈದ್ಯಕೀಯ ವಿಜ್ಞಾನ ಕಾಲೇಜುಗಳ ಹಾಸಿಗೆಗಳನ್ನು ಸರ್ಕಾರದ ಸುಪರ್ಧಿಗೆ ಪಡೆದುಕೊಂಡು ಮೀಸಲಿರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಈ ಕಾಲೇಜುಗಳ ಡಯಾಲಿಸಿಸ್‌, ತುರ್ತು ಆರೋಗ್ಯ ಪರಿಸ್ಥಿತಿ, ತಾಯಿ – ಮಗುವಿನ ಹಾಸಿಗೆ ಹೊರತು ಪಡಿಸಿದಂತೆ ಉಳಿದ 7500 ಹಾಸಿಗೆಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಲಾಗುವುದಾಗಿ ಸುಧಾಕರ್‌ ತಿಳಿಸಿದ್ದಾರೆ.

ಕೊರೋನ ಹೊರತು ಪಡಿಸಿ ಇತರ ರೋಗಿಗಳ ಚಿಕಿತ್ಸೆಗೆ ಬೆಂಗಳೂರಿನಲ್ಲಿ 30 ಹಾಸಿಗೆಗಳನ್ನು ಒಳಗೊಂಡಿರುವ ನರ್ಸಿಂಗ್‌ ಹೋಂಗಳನ್ನು ಬಳಕೆ ಮಾಡಲಾಗುತ್ತದೆ. ಹೆಚ್ಚು ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಆಸ್ಪತ್ರೆಗಳ ಒಟ್ಟು 80% ಹಾಸಿಗೆಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡುವಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಜನರಲ್ ವಾರ್ಡ್, ಐಸಿಯು, ವೆಂಟಿಲೇಟರ್‌, ಆಕ್ಸಿಜನೇಟೆಡ್‌ ಮೊದಲಾದವುಗಳನ್ನು ಒಳಗೊಂಡಂತೆ ಎಲ್ಲಾ ಹಾಸಿಗೆಗಳು ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡುವಂತೆ ಅವರು ಸೂಚಿಸಿದ್ದಾರೆ.

ಇವುಗಳಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವ ಸುಧಾಕರ್‌ ಈ ಸಂಧರ್ಭ ತಿಳಿಸಿದ್ದಾರೆ.

Leave A Reply

Your email address will not be published.