ಇಂದಿನಿಂದ ಬ್ಯಾಂಕ್‌ಗಳ ವ್ಯವಹಾರ ಸಮಯ ಬದಲು | ಮಧ್ಯಾಹ್ನದವರೆಗೆ ಅಗತ್ಯ ಸೇವೆ ಮಾತ್ರ ಲಭ್ಯ

ಕೋವಿಡ್-19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೂತನ ಮಾರ್ಗಸೂಚಿ ಜಾರಿ ಮಾಡಿರುವ ಬೆನ್ನಲ್ಲೇ ಬ್ಯಾಂಕ್ ವ್ಯವಹಾರಗಳ ಸಮಯವನ್ನೂ ಸಹ ಬದಲಾವಣೆ ಮಾಡಲಾಗಿದೆ.

ಈ ಕುರಿತಂತೆ ಎಸ್‌ಎಲ್‌ಬಿಸಿ ಮನವಿಯಂತೆ ಲೀಡ್ ಬ್ಯಾಂಕ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇದರಂತೆ ಬ್ಯಾಂಕ್ ವ್ಯವಹಾರ ಸಮಯವನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಹಾಗೂ ಕೆಲಸದ ಸಮಯವನ್ನು 10 ರಿಂದ 4 ಗಂಟೆಯವರೆಗೆ ನಿರ್ವಹಿಸಬಹುದಾಗಿದೆ.

ಎ.22ರಿಂದ ಮೇ.31ರವರೆಗೂ ಜಾರಿಯಲ್ಲಿರುತ್ತದೆ. ಬ್ಯಾಂಕ್ ಸಿಬ್ಬಂದಿಗಳ ಹಿತದೃಷ್ಟಿಯಿಂದ ಶೇ.50ರಷ್ಟು ಸಿಬ್ಬಂದಿಗಳು ಬದಲಿ ದಿನದಂತೆ ಕಾರ್ಯನಿರ್ವಹಿಸಲು ಅವಕಾಶವನ್ನು ನೀಡಲಾಗಿದೆ.

ನಗದು ವ್ಯವಹಾರ, ಚೆಕ್ ಕ್ಲಿಯರಿಂಗ್ ಸೇವೆಗಳು ಹಾಗೂ ಹಣ ಪಾವತಿ ಮಾಡುವಂತಹ ಕನಿಷ್ಟ ಸೇವೆಗಳಿಗೆ ಮಾತ್ರ ಮೇ.31ರವರೆಗೂ ಆದ್ಯತೆ ಇರುತ್ತದೆ. ಸೂಚಿಸಲಾಗಿರುವ ವ್ಯವಹಾರದ ಅವಧಿಯಲ್ಲಿ ಸಿಬ್ಬಂದಿಗಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸ್ಯಾನಿಟೈಜ್ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ. ಇದೇವೇಳೆ ಎಟಿಎಂ ಮೂಲಕ ಹಣದ ವ್ಯವಹಾರಕ್ಕೆ ಗ್ರಾಹಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ನಾಳೆಯಿಂದ ಮೇ 31ರವರೆಗೂ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಮಾತ್ರ ಬ್ಯಾಂಕ್ ವ್ಯವಹಾರಗಳು ನಡೆಯಲಿದೆ. ಅಲ್ಲದೇ, ಬದಲಿ ದಿನಗಳಂತೆ ಪ್ರತಿದಿನ ಶೇ. 50ರಷ್ಟು ಸಿಬ್ಬಂದಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಲಾಗಿದೆ.

ಇನ್ನು, ಮೇ 31ರವರೆಗೂ ಅನ್ವಯವಾಗುವಂತೆ ಪ್ರತಿ ಶನಿವಾರ ಹಾಗೂ ಭಾನುವಾರ ಬ್ಯಾಂಕ್ ರಜೆಯಿರುತ್ತದೆ.

Leave A Reply

Your email address will not be published.