ಟ್ರಾಕ್ ಗೆ ಬಿದ್ದಿದ್ದ ಮಗುವನ್ನು ಶರವೇಗದಿಂದ ಓಡಿ ರೈಲಿನಿಂದ ರಕ್ಷಿಸಿದ ಮಯೂರ್ ಶೆಲ್ಕೆಗೆ 50 ಸಾವಿರ ರೂ. ಮತ್ತು ಜಾವಾ ಕ್ಲಾಸಿಕ್ ಬೈಕ್ ಬಹುಮಾನ

ಶರವೇಗದಲ್ಲಿ ಓಡಿ ಬರುತ್ತಿರುವ ಲೆಕ್ಕಿಸದೆ ಹಳಿ ಮೇಲೆ ಬಿದ್ದಿದ್ದ ಮಗುವನ್ನು ರಕ್ಷಿಸಿದ ಶರವೇಗದ ಸರದಾರ, ದೇಶದ ರಿಯಲ್ ಹೀರೋ, ಮುಂಬೈನ ಮಯೂರ್ ಶೆಲ್ಕೆಗೆ ಈಗ ದೇಶಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಂತೆಯೇ ಇದೀಗ ರೈಲ್ವೆ ವಲಯದ ಪಾಯಿಂಟ್ ಮನ್ ಮಯೂರ್ ಶೆಲ್ಕೆಗೆ ಕೇಂದ್ರ ರೈಲ್ವೆ ಇಲಾಖೆಯಿಂದ 50 ಸಾವಿರ ರೂ. ಬಹುಮಾನ ನೀಡಿದರೆ, ಇತ್ತ ಜಾವಾ ಬೈಕ್ ಕೂಡ ಉಡುಗೊರೆಯಾಗಿ ಸಿಕ್ಕಿದೆ.

ಅಂದು ಮಗುವನ್ನು ರಕ್ಷಿಸಿದ ಮಯೂರ್ ನ ವೀಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದಂತೆಯೇ ಅವರಿಗೆ ದೇಶದೆಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರಗಳೇ ಹರಿದು ಬಂದಿದೆ. ಮಯೂರ್ ಅವರ ಈ ಮಾನವೀಯ ಕಾರ್ಯ ಹಾಗೂ ಧೈರ್ಯಕ್ಕೆ ರೈಲ್ವೇ ಇಲಾಖೆ ಹಣ ನೀಡುವ ಮೂಲಕ ಸಾಂಕೇತಿಕ ಗೌರವ ತೋರಿದರೆ, ಇತ್ತ ಆನಂದ್ ಮಹಿಂದ್ರಾ ಒಡೆತನದ ಯಾವ ಕಂಪನಿ ತನ್ನ ಕ್ಲಾಸಿಕ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸಿದೆ.

ಅಲ್ಲದೆ ಅಲ್ಲಿನ ರೈಲ್ವೇ ತಂಡ ಆತನಿಗೆ ಸ್ಟ್ಯಾಂಡಿಂಗ್ ಓವೇಷನ್ ನೀಡಿ ಗೌರವಿಸಿದೆ.

ಅವತ್ತು ನಡೆದ ಆ ಸಾಹಸಕಾರ್ಯದ ಸಂಪೂರ್ಣ ವಿವರಣೆ

ರೈಲ್ವೆ ಸಿಬ್ಬಂದಿಯೊಬ್ಬರು ತನ್ನ ಪ್ರಾಣ ಪಣಕ್ಕಿಟ್ಟು ರೈಲು ಬರುತ್ತಿದ್ದ ವೇಳೆಯೇ ಆಯತಪ್ಪಿ ಹಳಿ ಮೇಲೆ ಬಿದ್ದ ಮಗುವನ್ನು ರಕ್ಷಿಸಿದ ಘಟನೆ ಮುಂಬೈ ವಿಭಾಗದ ರೈಲ್ವೆ ನಿಲ್ದಾಣವೊಂದರಲ್ಲಿ ನಡೆದಿತ್ತು. ಎಲ್ಲ ಘಟನೆಯೂ ಕಣ್ಣು ಮುಚ್ಚಿ ತೆರೆಯುವುದರೊಳಗೆ ಆಗಿ ಘಟಿಸಿ ಹೋಗಿದೆ.

ಮುಂಬೈನ ವಂಗಾನಿ ರೈಲು ನಿಲ್ದಾಣದಲ್ಲಿ ನಡೆದ ಈ ಭಯಾನಕ ಘಟನೆ ಮತ್ತು ಆಗ ಅಲ್ಲಿನ ಸಿಬ್ಬಂದಿ ಒಬ್ಬ ತೋರಿದ ಸಾಹಸ ವಿಡಿಯೋ ಇದೀಗ ವೈರಲ್ ಆಗಿದ್ದು ಅದೀಗ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಗಮನ ಸೆಳೆದಿತ್ತು.

ಪಾಪ, ಆ ಮಗುವಿನ ಅಮ್ಮ ಅಂಧ ಮಹಿಳೆಯಾಗಿದ್ದಳು. ಅಮ್ಮ ಮತ್ತು ಮಗು ಫ್ಲಾಟ್ ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುವ ವೇಳೆ ಮಗು ಆಯತಪ್ಪಿ ರೈಲು ಟ್ರಾಕ್ ಗೆ ಬಿದ್ದುಬಿಟ್ಟಿದೆ. ದುರದೃಷ್ಟವಶಾತ್ ರೈಲು ಧುಮುಗುಡುತ್ತ ಬಂದೇ ಬಿಟ್ಟಿದೆ.

ಅಂಧ ಅಮ್ಮ ಏನೂ ಮಾಡಲಾಗದೆ, ಇನ್ನೇನು ರೈಲು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ಅಲ್ಲಿನ ರೈಲ್ವೆ ಸಿಬ್ಬಂದಿ ಒಬ್ಬಾತ ಕ್ಷಿಪ್ರ ಓಟದ ಚಿರತೆಯಂತೆ, ಮೈಮೇಲೆ ಖುದ್ದು ದೇವರನ್ನು ಆಹ್ವಾನಿಸಿಕೊಂಡು ಓಡಿದಂತೆ ಓಡಿದ್ದಾನೆ.

ಆತ ದೇವರಂತೆ ಬಂದು ಮಗುವನ್ನೆತ್ತಿ ಪ್ಲಾಟ್ ಫಾರ್ಮ್ ನ ಮೇಲಕ್ಕೆ ಬಿಸಾಕಿ, ನಂತರ ತಾನೂ ಮೇಲಕ್ಕೆ ಚಿಮ್ಮಿದ್ದಾನೆ. ಪ್ರಾಣ ಪಣಕ್ಕಿಟ್ಟು ಮಗುವಿನ ಜೀವ
ಉಳಿಸಿದ್ದಾನೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ, ಮುಂಬೈ ವಿಭಾಗದ ಮಯೂರ್ ಶೆಲ್ಖೆ ಅವರು ಮಗುವನ್ನು ರಕ್ಷಿಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದೆ. ಅಲ್ಲದೆ ಘಟನೆಯ ವಿಡಿಯೊವನ್ನು ಹಂಚಿಕೊಂಡಿತ್ತು. ಆತನ ಧೈರ್ಯಶಾಲಿ ಕಾರ್ಯವನ್ನು ಮಾಡಿದ ಮುಂಬೈನ ವಂಗಾನಿ ರೈಲ್ವೆ ನಿಲ್ದಾಣದ ರೈಲ್ವೆಮ್ಯಾನ್ ಮಯೂರ್ ಶೆಲ್ಖೆ ಅವರ ಬಗ್ಗೆ ತುಂಬಾ ಹೆಮ್ಮೆಯಾಗುತ್ತಿದೆ. ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಮತ್ತು ಮಗುವಿನ ಜೀವ ಉಳಿಸಿದ್ದಾರೆ ಎಂದು ಪಿಯೂಷ್ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

Leave A Reply

Your email address will not be published.