ಬೆಳ್ತಂಗಡಿಯ ಹೆಮ್ಮೆಯ ಹುಡುಗ | ಮೀನು ಮಾರುತ್ತ, ಆಟೋ ಓಡಿಸುತ್ತಾ ಡಾಕ್ಟರೇಟ್ ಪಡೆದ ನಿಯಾಜ್ !!

ಸಾಧನೆಯ ಹಾದಿಯಲ್ಲಿ ಆತನನ್ನು ಯಾವುದೂ ತಡೆಯಲಿಲ್ಲ. ಪುಸ್ತಕ ಕೊಳ್ಳಲು ಕೂಡ ಮನೆಯಲ್ಲಿ ಹಣವಿಲ್ಲದಿದ್ದರೂ ಆತ ವಿಚಲಿತನಾಗಲಿಲ್ಲ.
ಮೀನು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಹೆಣ ಗಿದ ಹುಡುಗ, ಗದ್ದೆಗಳಲ್ಲಿ ಕೂಲಿ ನಾಲಿ ಮಾಡಿ ಅವರಿವರ ಮನೆಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಯುವಕ ಇದೀಗ ಪಿ ಹೆಚ್ ಡಿ  ಪದವಿ ಪಡೆದುಕೊಂಡಿದ್ದಾನೆ.

ಈಗ 29 ರ ಹರೆಯದ ನಿಯಾಜ್ ಅವರು ತಮ್ಮಸಂಶೋಧನಾ ಪ್ರಬಂಧವಾದ,” ಗ್ರಾಮೀಣ ಮುಸ್ಲಿಂ ಸಮುದಾಯಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರಿ ಬ್ಯಾಂಕಿಂಗ್ ಪಾತ್ರ – ಕರ್ನಾಟಕದ ಡಿಕೆ ಜಿಲ್ಲೆಯಲ್ಲಿ ಒಂದು ಅಧ್ಯಯನ” ಗಾಗಿ ವಾಣಿಜ್ಯದಲ್ಲಿ ಪಿಎಚ್‌ಡಿ ಪಡೆದಾಗ ಇಡೀ ಊರು ಆತನಿಗಾಗಿ ಹೆಮ್ಮೆಪಟ್ಟಿದೆ.

ಆತನ ತಂದೆ, ತಮ್ಮ ಕಾಯಿಲೆಗಳ ಹೊರತಾಗಿಯೂ, ದೈನಂದಿನ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ, ಅವರ ತಾಯಿ ಜುಬೈದಾ ದಂಪತಿಗಳ ಎಂಟು ಮಕ್ಕಳನ್ನು ನೋಡಿಕೊಳ್ಳಲು ಬೀಡಿ ಕಟ್ಟುತ್ತಿದ್ದಾರೆ. ನಾಲ್ಕು ಹುಡುಗಿಯರು ಮತ್ತು ನಾಲ್ಕು ಹುಡುಗರು ಇರುವ ಆ ಸಂಸಾರದಲ್ಲಿ ಆತನೇ ಕಿರಿಯ ಮಗ. ” ನಾನು ಯಾವಾಗಲೂ ಶಿಕ್ಷಕನಾಗಲು ಬಯಸುತ್ತೇನೆ. ಬಡತನವು ನನ್ನ ಗುರಿಗೆ ಅಡ್ಡಿಯಾಗಿ ನಿಲ್ಲುತ್ತದೆ ಎಂದು ನನಗೆ ತಿಳಿದಿತ್ತು. ಆದ್ದರಿಂದ ನಾನು ಬಾಲ್ಯದಿಂದಲೇ ಜೀವನಕ್ಕಾಗಿ ಯಾವುದು ಸಿಗುತ್ತೋ ಆ ಕೆಲಸ ಮಾಡಲು ಸಿದ್ಧನಾಗಿದ್ದೆ ”ಎಂದು ನಿಯಾಜ್ ಅವರು ಹೇಳಿದ್ದಾರೆ.

ಮೀನು ಮಾರಾಟದಿಂದ ಹಿಡಿದು ಮೇಸ್ತ್ರಿಯ ತನಕ ಮತ್ತು ಆಟೋ ಡ್ರೈವರ್ ಆಗಿ ಕೂಡ ಅವರು ಕೆಲಸ ಮಾಡಿದ್ದಾರೆ. ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ. “ಒಂದನೇ ತರಗತಿಯಲ್ಲಿ, ನಾನು ಪಕ್ಕದ ಮನೆಯೊಂದರಲ್ಲಿ ಮನೆಯ ಸಹಾಯಕರಾಗಿದ್ದೆ, ನಂತರ ಬಾವಿಗಳಿಗೆ ರಿಂಗ್ ಅಳವಡಿಸುವ ಕೆಲಸವನ್ನು ಮಾಡುತ್ತಿದ್ದೆ” ಎಂದು ಅವರು ನೆನಪಿಸಿಕೊಂಡರು.

ಪ್ರೌಢ ಶಾಲೆಯಲ್ಲಿರುವಾಗ ನಿಯಾಜ್ ಭತ್ತದ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಸ್ವಲ್ಪ ಸಮಯ ಪತ್ರಿಕೆಗಳನ್ನು ಮನೆಮನೆಗೆ ಹಾಕುವ ಕೆಲಸವನ್ನು ಕೂಡ ನಿರ್ವಹಿಸುತ್ತಿದ್ದರು.

ನಿಯಾಜ್ ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಎಂ.ಕಾಂ ಮುಗಿಸಿ ನಂತರ ಮಂಗಳೂರಿನ ಯೂನಿವರ್ಸಿಟಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಜಿ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಸಂಯೋಜಕರಾದ ಅಬುಬಕ್ಕರ್ ಸಿದ್ದಿಕ್ ಅವರ ಅಡಿಯಲ್ಲಿ ಅವರು 2016 ರ ಬಳಿ ಪಿಎಚ್‌ಡಿ ಗೆ ಸೇರಿಕೊಂಡರು. “ ಆಗ ನನಗೆ 25 ಸಾವಿರ ರೂ.ಗಳ ವಿದ್ಯಾರ್ಥಿವೇತನಕ್ಕೆ ಅರ್ಹತೆ ಇತ್ತು. ಆದರೆ ಅದು ಸಮಯಕ್ಕೆ ಸರಿಯಾಗಿ ಸಿಗುತ್ತಿರಲಿಲ್ಲ. ಆದ್ದರಿಂದ, ನನ್ನ ಪಿಎಚ್‌ಡಿಯ ಮೊದಲ ಎರಡು ವರ್ಷಗಳ ಕಾಲ ನಾನು ಮಡಂತ್ಯಾರಿನಲ್ಲಿ ಮೀನುಗಳನ್ನು ಮಾರುತ್ತಿದ್ದೆ. ಅಲ್ಲಿಂದ ಮೀನನ್ನು ಕೇರಳಕ್ಕೆ ಸಾಗಿಸುತ್ತಿದ್ದೆ ” ಎಂದು ತಮ್ಮ ಸಾಧನೆಯ ಹಾದಿಯಲ್ಲಿನ ಕಷ್ಟದ ದಿನಗಳನ್ನು ಅವರು ನೆನಪಿಸಿಕೊಂಡರು.

ಆತನ ಪಾರ್ಟ್ ಟೈಮ್ ಉದ್ಯೋಗಗಳು ನಿಯಾಜ್ ಅವರ ವಿದ್ಯಾಭ್ಯಾಸಕ್ಕೆ ಎಂದಿಗೂ ಪರಿಣಾಮ ಬೀರಲಿಲ್ಲ. ಅವರು ನಿಯಮಿತವಾಗಿ ಓದಿ, ಪಿಎಚ್‌ಡಿ ಅಧ್ಯಯನ ನಡೆಸಿ ಐದು ವರ್ಷಗಳಲ್ಲಿ ಅದನ್ನು ಪೂರ್ಣಗೊಳಿಸಿದ್ದಾರೆ. ಕಾಲೇಜಿನಲ್ಲಿರುವಾಗ, ಅವರು ಬೆಳಿಗ್ಗೆ 7 ರಿಂದ 9 ರವರೆಗೆ ಮತ್ತು ಸಂಜೆ 4-8 ರವರೆಗೆ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಎಂಕಾಮ್ ದಿನಗಳಲ್ಲಿ, ನಿಯಾಜ್ ಎರಡು ವಸತಿಗೃಹಗಳಲ್ಲಿ ಸ್ವಾಗತಕಾರರಾಗಿದ್ದರು. ಇಂತಹ ಕಷ್ಟದ ಜೀವನ ನಡೆಸಿಯೂ ಆತ ವಿದ್ಯಾಭ್ಯಾಸದಿಂದ ವಿಮುಖರಾಗಲಿಲ್ಲ. ನಿಯಾಜ್ ಇದುವರೆಗೆ 25 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ ಮತ್ತು ಸದ್ಯಕ್ಕೆ ಶ್ರೀನಿವಾಸ್ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

Leave A Reply

Your email address will not be published.