“ಲೋ ಮಚ್ಚಾ ಸಗಣಿ ನೋಡಿದ್ಯೇನೋ” ಅಂತ ನಿಮ್ಮನ್ನು ಗೆಳೆಯರು ಕೇಳಿದರೆ ಏನಿರುತ್ತೆ ನಿಮ್ಮ ರಿಯಾಕ್ಷನ್ ?!

“ಲೋ ಮಚ್ಚಾ ಸಗಣಿ ನೋಡಿದ್ಯೇನೋ” ಅಂತ ನಿಮ್ಮನ್ನು ಗೆಳೆಯರು ಕೇಳಿದರೆ ಏನಿರುತ್ತೆ ನಿಮ್ಮ ರಿಯಾಕ್ಷನ್ ?

ಹೋಗಲಿ, ನಿಮಗೆ ಇನ್ನೊಂದು ಪ್ರಶ್ನೆ. ” ಗೆಳೆಯಾ, ಸಗಣಿ ನೋಡ್ಕೊಂಡು ಬರೋಣ, ಟಿಕೆಟ್ ರೆಡಿ ಇದೆ ” ಅಂತ ಯಾರಾದ್ರೂ ನಿಮ್ಮನ್ನು ಕೇಳಿದರೆ ಆಗ ಏನನ್ನಿಸುತ್ತದೆ ?” ಖಚಿತವಾಗಿ ನೀವು ತಡಬಡಾಯಿಸುವುದಂತೂ ಸತ್ಯ. ಅಷ್ಟಕ್ಕೂ ಏನಿದು ಸಗಣಿಯ ಕಥೆ?!

ಸಿನಿಮಾ ಟೈಟಲ್‌ಗಳ ವಿಷಯಕ್ಕೆ ಬಂದರೆ ಒಂಟಿ ಅಕ್ಷರಗಳು, ಸಂಖ್ಯೆಗಳು, ಚಿಹ್ನೆಗಳು, ಹಾಡಿನ ಸಾಹಿತ್ಯ, ಸಿನಿಮಾ ಡೈಲಾಗ್ಸ್, ಊರಿನ ಹೆಸರು, ಪ್ರಾಣಿಯ ಹೆಸರು, ಡಬಲ್ ಮೀನಿಂಗ್ ಪದಗಳು, ಬಯ್ಯೋ ಮಾತುಗಳು ಹೀಗೆ ಇನ್ನೂ ನಾನಾ ಬಗೆಯ ಶೀರ್ಷಿಕೆಗಳನ್ನು ನೋಡಿದ್ದೇವೆ. ಆದರೆ ಈಗ ಮತ್ತೊಂದು ಹೊಚ್ಚ ಹೊಸ ಸಿನಿಮಾ ಘೋಷಣೆಯಾಗಿದೆ. ಅಷ್ಟು ಸುಂದರ ಹೆಸರು ಇಲ್ಲಿ ತನಕ ಯಾರೂ ಇಟ್ಟಿಲ್ಲ. ಮುಂದೆ ಕೂಡ ಇಡೋದು ಡೌಟ್. ಹಾಗೆ ಇಟ್ಟ ಸುಂದರ ಹೆಸರೇ ‘ ಗೋಬರ್ ‘ ಅರ್ಥಾತ್ ಸಗಣಿ ಅಂತ…!

ಬಾಲಿವುಡ್ ಆಕ್ಷನ್ ಕಿಂಗ್ ಅಜಯ್ ದೇವಗನ್ ಮತ್ತು ಸಿದ್ಧಾರ್ಥ್ ರಾಯ್ ಕಪೂರ್ ಇಬ್ಬರೂ ಸೇರಿ ನಿರ್ಮಿಸುತ್ತಿರುವ ಹೊಸ ಸಿನಿಮಾ ಹೆಸರು ಗೋಬರ್ ಅಂತ ಫಿಕ್ಸ್ ಮಾಡಲಾಗಿದೆ. ಈ ಚಿತ್ರಕ್ಕೆ ಸಬಲ್ ಶೇಖಾವತ್ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಕುರಿತು ಖುದ್ದು ಸೂಪರ್ ಸ್ಟಾರ್ ಅಜಯ್ ದೇವಗನ್ ಅವರೇ ತಮ್ಮ ಟ್ವಿಟರ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

1990ರ ದಶಕದಲ್ಲಿ ನಡೆಯುವ ಕಥೆ ಇದಾಗಿದ್ದು, ಒಬ್ಬ ದಕ್ಷ, ಪ್ರಾಮಾಣಿಕ ಸರ್ಕಾರಿ ಆಸ್ಪತ್ರೆಯ ಪಶು ವೈದ್ಯ, ಭ್ರಷ್ಟಾಚಾರದಲ್ಲಿ ಮುಳುಗಿರುವ ಆಸ್ಪತ್ರೆ ಸಿಬ್ಬಂದಿ ಹಾಗೂ ವ್ಯವಸ್ಥೆಯ ವಿರುದ್ಧ ಹೇಗೆಲ್ಲಾ ಹೋರಾಡುತ್ತಾನೆ ಹೇಗೆಲ್ಲಾ ಕೆಸರೆರಚಾಟ, ಸ್ಸಾರಿ, ಸಗಣಿ ಎರೆಚಾಟ ನಡೆಯುತ್ತದೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.

ಒಬ್ಬ ಸಾಮಾನ್ಯ ವ್ಯಕ್ತಿ ಭ್ರಷ್ಟಾಚಾರದ ವಿರುದ್ಧ ನಡೆಸುವ ಸಾಹಸಮಯ ಹೋರಾಟವನ್ನೇ ಹಾಸ್ಯದ ಸ್ಪರ್ಶ ನೀಡುವ ಮೂಲಕ ಪ್ರೇಕ್ಷಕರಿಗೆ ಕಚಗುಳಿ ನೀಡುವ ಪ್ರಯತ್ನವೇ ಗೋಬರ್ ಎಂದು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ರಾಯ್ ಕಪೂರ್ ಫಿಲ್ಮ್​ನ ಸಿದ್ಧಾರ್ಥ್ ರಾಯ್ ಕಪೂರ್ ಹೇಳಿಕೊಂಡಿದ್ದಾರೆ. ಈ ಸಿನಿಮಾ ಜನರನ್ನು ಥಿಯೇಟರ್‌ಗಳಿಗೆ ಕೇವಲ ಕರೆದುಕೊಂಡು ಬರುವುದಷ್ಟೇ ಅಲ್ಲ, ನಗಿಸುತ್ತೆ, ರಿಲ್ಯಾಕ್ಸ್ ಮಾಡಿಸುತ್ತೆ. ಎಲ್ಲಕ್ಕಿಂತ ಹೆಚ್ಚಾಗಿ ಯೋಚಿಸುವಂತೆ ಮಾಡುತ್ತೆ. ಅಷ್ಟರ ಮಟ್ಟಿಗೆ ಈ ಸಿನಿಮಾ ವಿಷಯದ ಬಗ್ಗೆ ನನಗೆ ಆತ್ಮವಿಶ್ವಾಸವಿದೆ ಎಂದು ಖುದ್ದು ಅಜಯ್ ದೇವಗನ್ ಕೂಡ ಭರವಸೆ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವರ್ಷದಾಂತ್ಯಕ್ಕೆ ಗೋಬರ್ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಸದ್ಯ ಚಿತ್ರದ ( ಸಗಣಿಯ) ನಾಯಕನ ಪಾತ್ರಕ್ಕಾಗಿ ಹಾಗೂ ಉಳಿದ ತಾರಾಗಣಕ್ಕಾಗಿ ಆಯ್ಕೆ ಭರದಿಂದ ಸಾಗಿದೆ.

Leave A Reply

Your email address will not be published.