ಮತ ಪ್ರವಚನ ನೀಡಲು ತೆರಳಿದ್ದ ಸುಳ್ಯದ ವಿದ್ಯಾರ್ಥಿ ಮಸೀದಿಯಲ್ಲಿ ಮೃತ್ಯು

ಮಂಗಳೂರಿನ ಹೊರವಲಯದ ಮರಕಡ ಮಸೀದಿಗೆ ರಮಝಾನ್‌ನ ಮತ ಪ್ರವಚನ ನೀಡಲು ಬಂದಿದ್ದ ಸುಳ್ಯ ಮೂಲದ ವಿದ್ಯಾರ್ಥಿಯೊಬ್ಬ ಮಸೀದಿಯಲ್ಲೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಸುಳ್ಯ ಸಮೀಪದ ಅಜ್ಜಾವರದ ಹಸೈನಾರ್ ಹಾಜಿ-ಜೊಹರಾ ದಂಪತಿಯ ಪುತ್ರ ಅಬ್ದುಲ್ ಅಲ್ ಸಿನಾನ್ ಅಜ್ಜಾವರ (20) ಮೃತಪಟ್ಟ ಯುವಕ.

ಸಿನಾನ್ ಕೂಡ ಶುಕ್ರವಾರ ಮುಸ್ಸಂಜೆ  ಮರಕಡದ ಜುಮಾ ಮಸೀದಿಗೆ ತೆರಳಿ,ಉಪವಾಸ ವೃತ ತೊರೆದು, ತರಾವೀಹ್ ನಮಾಜ್ ಮುಗಿಸಿ ಮತ ಪ್ರವಚನ ನೀಡಿದ್ದರು.

ಶನಿವಾರ ಬೆಳಗ್ಗೆ ಎದ್ದು ರಮ್ಝಾನ್ ವೃತದ ಅನ್ವಯ ಊಟ ಮಾಡಿ, ತಟ್ಟೆ ತೊಳೆಯುತ್ತಿದ್ದಾಗ ಸಿನಾನ್ ಕುಸಿದು ಬಿದ್ದಿದ್ದರು.

ಮರಕಡ ಜುಮಾ ಮಸೀದಿಯ ಖತೀಬ್ ಇಸಾಕ್ ಸಖಾಫಿ ಕೂಡ ಸಿನಾನ್‌ನ ಸಂಬಂಧಿಯಾಗಿದ್ದು, ಸಿನಾನ್‌ಗೆ ಅಪಸ್ಮಾರ ರೋಗವಿರುವ ಬಗ್ಗೆ ತಿಳಿದಿದ್ದ ಅವರು  ಮನೆಯವರಿಗೆ ಮಾಹಿತಿ ನೀಡಿದ್ದರು.

ಮನೆಯವರ ಸೂಚನೆಯ ಮೇರೆಗೆ ಕುಸಿದು ಬಿದ್ದಿದ್ದ ಸಿನಾನ್‌ನನ್ನು ಅಲ್ಲೇ ಮಲಗಿಸಿದ್ದರು.

8 ಗಂಟೆಯಾದರೂ ಎದ್ದೇಳದ ಕಾರಣ ಮನೆಯವರ ಗಮನಕ್ಕೆ ತರಲಾಯಿತು. ಮತ್ತೆ ಅವರ ಸೂಚನೆಯ ಮೇರೆಗೆ ಇಸಾಕ್ ಸಖಾಫಿಯವರು ಸಿನಾನ್‌ನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಸಿನಾನ್ ಮಲಗಿದಲ್ಲೇ ಮೃತಪಟ್ಟಿದ್ದರು.

ಪುತ್ತೂರು ತಾಲೂಕಿನ ಕುಂಬ್ರದಲ್ಲಿ  ಕೆಐಸಿ ವಾಫಿ (ಸನದು) ದ್ವಿತೀಯ ತರಗತಿಯ ವಿದ್ಯಾರ್ಥಿಯಾಗಿದ್ದ ಈತ ಬಿಕಾಂ ಕಲಿಯುತ್ತಿದ್ದರು.ಮೃತ ಸಿನಾನ್ ತಂದೆ,ತಾಯಿ,ಸಹೋದರ,ಸಹೋದರಿಯನ್ನು ಅಗಲಿದ್ದಾರೆ.


Leave A Reply

Your email address will not be published.