ಸುಳ್ಯ ಕಾನೂನು ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ

ಸುಳ್ಯದ ಕಾನೂನು ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಸ್ಕಾರ್ಫ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ನೀಡದ ವಿಚಾರದಲ್ಲಿ ಉಂಟಾದ ವಿವಾದವು, ಕಾಲೇಜು ಪ್ರಾಂಶುಪಾಲರು, ಸಲಹೆಗಾರರು ಹಾಗೂ ವಿದ್ಯಾರ್ಥಿನಿಯ ಪೋಷಕರ ನಡುವೆ ಮಾತುಕತೆ ಬಳಿಕ ಸುಖಾಂತ್ಯಗೊಂಡ ಘಟನೆ ವರದಿಯಾಗಿದೆ.

ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ  ವಿಶ್ವವಿದ್ಯಾನಿಲಯದ ಪರೀಕ್ಷೆ ಆರಂಭಗೊಂಡಿದೆ. ನಿಯಮದ ಪ್ರಕಾರ ಸಮವಸ್ತ್ರ ಹಾಗೂ ಪರೀಕ್ಷೆ ಸಂಬಂಧಿತ ವಸ್ತುಗಳು ಹೊರತು ಪಡಿಸಿ ಇತರ ವಸ್ತುಗಳನ್ನು ತರಲು ಅವಕಾಶವಿಲ್ಲ ಎನ್ನಲಾಗಿದೆ. ಈ ನಡುವೆ ಪ್ರಥಮ ಕಾನೂನು ಪದವಿಯ ವಿದ್ಯಾರ್ಥಿನಿಯೊಬ್ಬಳು ತಲೆಗೆ ಸ್ಕಾರ್ಫ್ ಕಟ್ಟಿಕೊಂಡು ಪರೀಕ್ಷೆ ಬರೆಯಲು ಹೋಗಿದ್ದು, ಆಗ ಕಾಲೇಜಿನ ಪ್ರಾಂಶುಪಾಲರು ಪರೀಕ್ಷಾ ಹಾಲ್ ಗೆ ಸ್ಕಾರ್ಫ್ ಕಟ್ಟಿಕೊಂಡು ಬರುವಂತಿಲ್ಲ, ಇದು ನಿಯಮಬಾಹಿರ ಎಂದು ಹೇಳಿದ್ದಾರೆ.

ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿ ತಾನು ಸ್ಕಾರ್ಫ್ ತೆಗೆದು ಪರೀಕ್ಷೆ ಬರೆಯುವುದಿಲ್ಲ ಎಂದು ಹೇಳಿ ಹೊರಬಂದಿದ್ದಳು ಎಂದು ತಿಳಿದುಬಂದಿದ್ದು, ಬಳಿಕ ವಿದ್ಯಾರ್ಥಿನಿ ಈ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದ್ದಾಳೆ.

ಘಟನೆ ಸಂಬಂಧ ಕ್ಯಾಂಪಸ್ ಫ್ರಂಟ್ ವಿದ್ಯಾರ್ಥಿ ಸಂಘಟನೆ ಕಾರ್ಯಕರ್ತರು  ಕಾನೂನು ಕಾಲೇಜು ಎದುರು ಜಮಾಯಿಸಿದ್ದು, ಈ ಸಂದರ್ಭ ಪೊಲೀಸರು ಹಾಗೂ ವಿದ್ಯಾರ್ಥಿನಿಯ ಪೋಷಕರು ಕೂಡಾ ಕಾಲೇಜಿಗೆ ಆಗಮಿಸಿದ್ದಾರೆ.

ಬಳಿಕ ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ, ಅಕಾಡೆಮಿ ಅಡ್ವೈಸರ್ ಪ್ರೊ.ಬಾಲಚಂದ್ರ ಗೌಡ, ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರ ನಡುವೆ ಮಾತುಕತೆ ನಡೆಯಿತು. ಕೆಲ ಹೊತ್ತು ನಡೆದ ಮಾತುಕತೆಯ ಬಳಿಕ, ‘ವಿದ್ಯಾರ್ಥಿನಿಯ ಇಚ್ಛೆಯಂತೆ ಸ್ಕಾರ್ಫ್ ಹಾಕಿ ಪರೀಕ್ಷೆ ಬರೆಯಲಿ. ಆದರೆ ಪರೀಕ್ಷೆ ಮೇಲ್ವಿಚಾರಕರು ಬಂದು ತಪಾಸಣೆ ನಡೆಸಿದರೆ ಅದಕ್ಕೆ ಸಹಕಾರ ನೀಡಬೇಕು’ ಎಂದು ಕಾಲೇಜಿನವರು ಹೇಳಿದಾಗ ವಿದ್ಯಾರ್ಥಿನಿ ಹಾಗೂ ಪೋಷಕರು ಒಪ್ಪಿದ್ದರಿಂದ ಪ್ರಕರಣ ಸುಖಾಂತ್ಯ ಕಂಡಿದೆ.

Leave A Reply

Your email address will not be published.