ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಈ ಮುಸ್ಲಿಂ ಕುಟುಂಬದ ಚಂಡಿಕಾ ಹೋಮ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ  ಮುಸ್ಲಿಂ ಕುಟುಂಬವೊಂದು ಕಳೆದ ಹಲವು ವರ್ಷಗಳಿಂದ ವರ್ಷಕ್ಕೊಮ್ಮೆ ಚಂಡಿಕಾಹೋಮ ನೆರವೇರಿಸುವ ಮೂಲಕ ಗಮನ ಸೆಳೆದಿದೆ. ಆ ಕುಟುಂಬವು ಎಲ್ಲರಂತೆ ಶ್ರದ್ಧಾಭಕ್ತಿಯಿಂದ ದೇವಿಯನ್ನು ಆರಾಧಿಸಿ ಸೇವೆಯನ್ನು ನೀಡುತ್ತಿದೆ.

ಬಳ್ಳಾರಿಯ ಗ್ರಾಮವೊಂದರ ನಿವಾಸಿ ಗುತ್ತಿಗೆದಾರ ಎಚ್. ಇಬ್ರಾಹಿಂ, ಸಾಜುದ್ದೀನ್ ಹಾಗೂ ಜರೀನಾ ಅವರ ಕುಟುಂಬದವರು ಹಲವು ವರ್ಷಗಳಿಂದ ಕೊಲ್ಲೂರಿಗೆ ಆಗಮಿಸಿ ಶ್ರೀದೇವಿಯ ದರ್ಶನ ಮಾಡಿ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದರು.
ಅಲ್ಲದೆ ಪ್ರತಿಬಾರಿ ದೇವಿಯ ದರ್ಶನ ಮಾಡುವಾಗ ವಿಶೇಷ ಪೂಜೆ ಮತ್ತು ಚಂಡಿಕಾಹೋಮ ನೆರವೇರಿಸುತ್ತಿದ್ದರು. ಈ ರೀತಿ ನಿಯಮಿತವಾಗಿ ದೇವಿಯ ದರ್ಶನ ಪಡೆದ ನಂತರ ಅವರ ಬಾಳಿನಲ್ಲಿ ಉನ್ನತಿ ಮತ್ತು ನೆಮ್ಮದಿ ಕಾಣಿಸಿತ್ತು.

ಈ ರೀತಿ ಹಿರಿಯರು ನಡೆಸಿಕೊಂಡು ಬಂದಂತಹ ನಂಬಿಕೆ ಮಕ್ಕಳು ಮುಂದುವರಿಸಿದ್ದಾರೆ.ಹಿರಿಯರ ಸೇವೆ, ತಾಯಿ ಮೂಕಾಂಬಿಕೆಯ ಅನುಗ್ರಹದಿಂದಾಗಿ ಬದುಕಿನಲ್ಲಿ ಶ್ರೇಯಸ್ಸಾಗಿದೆ ಎಂಬ ನಂಬಿಕೆಯೊಂದಿಗೆ ಇದೀಗ ಈ ಕುಟುಂಬದ ಕಿರಿಯ ಪುತ್ರ ಮನ್ಸೂರ್ ಹಾಗೂ ಅವರ ಪತ್ನಿ ಮಕ್ಕಳು ಕಳೆದ 5 ವರ್ಷಗಳಿಂದ ವರ್ಷಕ್ಕೊಮ್ಮೆ ಇಲ್ಲಿ ಚಂಡಿಕಾಹೋಮ ನಡೆಸುತ್ತಿದ್ದಾರೆ.

ಎಲ್ಲ ದೇವರೂ ಒಂದೇ. ಮೂಕಾಂಬಿಕೆಯ ಸನ್ನಿಧಿಯಲ್ಲಿ ಪೂಜೆ, ಚಂಡಿಕಾಹೋಮ ನಡೆಸುವ ಮೂಲಕ ಆತ್ಮಸಂತೃಪ್ತಿ ಹೊಂದಿದ್ದೇವೆ. ಅಮ್ಮನ ಅನುಗ್ರಹದಿಂದ ಸಂತೃಪ್ತಿಯ ಜೀವನ ನಡೆಸುತ್ತಿದ್ದೇವೆ. ಕ್ಷೇತ್ರದಲ್ಲಿ ವಿಶೇಷ ಶಕ್ತಿಯಿದೆ ಎನ್ನುವುದು ಬಳ್ಳಾರಿಯಿಂದ ಇಲ್ಲಿಗೆ ಬಂದು ಇಲ್ಲಿ ಪೂಜೆ ಪುರಸ್ಕಾರ ನಡೆಸಿಕೊಂಡು ಬರುತ್ತಿರುವ ಮನ್ಸೂರ್ ಅವರ ಹೇಳಿಕೆ.

Leave A Reply

Your email address will not be published.