ದ.ಕ.ಜಿಲ್ಲೆಯಲ್ಲಿ 256 ಮಂದಿಗೆ ಕೊರೋನ ಪಾಸಿಟಿವ್, ಈ ವರ್ಷದಲ್ಲಿ ಇದುವೇ ದಾಖಲೆ

ದ.ಕ.ಜಿಲ್ಲೆಯಲ್ಲಿ ಶುಕ್ರವಾರ 256 ಮಂದಿಗೆ ಕೊರೋನ ಪಾಸಿಟಿವ್ ಆಗಿದ್ದು, ಇದು ಈ ವರ್ಷದಲ್ಲೇ ಅತೀ ಹೆಚ್ಚು ಕೋವಿಡ್ ಪ್ರಕರಣ ಎಂದು ದಾಖಲಿಸಲ್ಪಟ್ಟಿವೆ.

ಕಳೆದ 48 ಗಂಟೆಗಳ ಅವಧಿಯಲ್ಲಿ ಪರೀಕ್ಷೆ ಮಾಡಿದವರ ಪೈಕಿ 256 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಈ ಏರಿಕೆಯು ಆತಂಕಕ್ಕೂ ಕಾರಣವಾಗಿದೆ.

ಶುಕ್ರವಾರ ಜಿಲ್ಲೆಯಲ್ಲಿ 92 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 37,562 ಮಂದಿ ಕೊರೋನ ಸೋಂಕಿಗೊಳಗಾಗಿದ್ದು, ಈ ಪೈಕಿ 35,405 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1,414 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಗರದ ಕಾನ್ವೆಂಟ್‌ವೊಂದರಲ್ಲಿ ಹತ್ತು ದಿನದ ಹಿಂದೆ ಒಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಅವರ ಪ್ರಾಥಮಿಕ ಸಂಪರ್ಕವುಳ್ಳ 59 ಮಂದಿಯನ್ನು ಕೊರೋನ ತಪಾಸಣೆಗೆ ಒಳಪಡಿಸಲಾಗಿದೆ.ಆ ಪೈಕಿ 19 ಮಂದಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ ಆ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ನೀರುಮಾರ್ಗ ಸಮೀಪದ ಮನೆಯೊಂದರ ಐದು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಅದನ್ನೂ ಕಂಟೈನ್‌ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ.

Leave A Reply

Your email address will not be published.