80 ಲಕ್ಷ ರೂ. ನಗದು ಕದ್ದು ಓಡುತ್ತಿದ್ದ ಕಳ್ಳನನ್ನು ಅರೆಕ್ಷಣದಲ್ಲಿ ನೆಲಕ್ಕುರುಳಿಸಿದ ವ್ಯಕ್ತಿ | ವಿಡಿಯೋ ವೈರಲ್

ವ್ಯಕ್ತಿಯೊಬ್ಬರ ಸಮಯಪ್ರಜ್ಞೆ ಮತ್ತು ಸಾಹಸಕ್ಕೆ ಸಾಕ್ಷಿ ಇದು. ಈ ವ್ಯಕ್ತಿಯ `ಫುಟ್ಬಾಲ್’ ಶೈಲಿಯ ಕಾರ್ಯಾಚರಣೆಯಿಂದ ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.

ಆ ಕಳ್ಳ 80 ಲಕ್ಷ ರೂ. ನಗದು ಹಿಡಿದು ಓಡುತ್ತಿದ್ದ. ಯಾರ ಕೈಗೂ ಸಿಗದೇ ಓಡುತ್ತಿದ್ದ ಆತನನ್ನು ವ್ಯಕ್ತಿಯೊಬ್ಬ ಕೇವಲ ಸಮಯ ಪ್ರಜ್ಞೆ ಉಪಯೋಗಿಸಿ ಹಿಡಿದಿದ್ದಾನೆ.

ಇದು ನಡೆದದ್ದು ದುಬೈಯಲ್ಲಿ. ಇಲ್ಲಿ ಕಳ್ಳನನ್ನು ಹಿಡಿಯಲು ನೆರವಾಗಿದ್ದು ಕೇರಳ ಮೂಲದ ವ್ಯಕ್ತಿ. ಸದ್ಯ ಪಕ್ಕಾ ಫಿಲ್ಮಿ ಸ್ಟೈಲ್‌ನ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.

ಕೇರಳ ಮೂಲದ 40 ವರ್ಷದ ಜಾಫರ್ ಪರಪುರಥ್ ಎಂಬವರ ಸಾಹಸದ ಕತೆಯಿದು. ಜಾಫರ್ ತನ್ನ ಸಂಬಂಧಿಯೊಬ್ಬರ ಕೆಫೆಟೇರಿಯಾದಲ್ಲಿದ್ದಾಗ ವ್ಯಕ್ತಿಯೊಬ್ಬ ಹಣದೊಂದಿಗೆ ಓಡುವ ದೃಶ್ಯವನ್ನು ಕಂಡಿದ್ದರು. ಈ ವೇಳೆ, ಅಲ್ಲಿದ್ದವರೆಲ್ಲಾ ಕಳ್ಳನನ್ನು ಹಿಡಿಯಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಈ ವೇಳೆ ಕಳ್ಳನನ್ನು ನೋಡಿದ ಜಾಫರ್ ಓಡುತ್ತಿದ್ದ ಕಳ್ಳನಿಗೆ ತನ್ನ ಕಾಲನ್ನು ಸಿಂಪಲ್ಲಾಗಿಿ ಆದರೆ ಅಷ್ಟೇ ಅಡ್ಡವಾಗಿ ಹಿಡಿದಿದ್ದರು. ಪರಿಣಾಮ, ವೇಗವಾಗಿ ಓಡುತ್ತಿದ್ದ ಕಳ್ಳ ಅರೆಕ್ಷಣದಲ್ಲಿ ಉರುಳಿ ನೆಲಕ್ಕುರುಳಿದ್ದ! ಆಗ ಓಡಿ ಬಂದು ಎಲ್ಲರೂ ಈ ಕಳ್ಳನನ್ನು ಹಿಡಿದಿದ್ದಾರೆ.

ಏಪ್ರಿಲ್ 14ರಂದು ಬನಿಯಾ ಸ್ಕ್ವೇರ್ ಲ್ಯಾಂಡ್‌ಮಾರ್ಕ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಇದಾದ ಬಳಿಕ ಕಳ್ಳನನ್ನು ಹಿಡಿದ ಜನರು ಈತನನ್ನು ಪೊಲೀಸರಿಗೊಪ್ಪಿಸಿದ್ದಾರೆ. ಜೊತೆಗೆ, ಈತ ಕದ್ದ ಹಣ ಸುರಕ್ಷಿತವಾಗಿ ಮಾಲೀಕರ ಕೈಸೇರಿದೆ.

20 ವರ್ಷಗಳಿಂದ ಯುಎಇನಲ್ಲಿರುವ ಜಾಫರ್ ಕೋವಿಡ್ ನ ಕಾರಣದಿಂದ ಕೆಲಸ ಕಳೆದುಕೊಂಡಿದ್ದರು. ಇದೀಗ ಮತ್ತೆ ಚಾಲಕನಾಗಿ ಇಲ್ಲಿ ಕೆಲಸ ಮಾಡಲು ಇವರು ಆ ದೇಶಕ್ಕೆ ಮರಳಿದ್ದರು. ಸದ್ಯ ಜಾಫರ್ ಅವರು ಕಳ್ಳನನ್ನು ಹಿಡಿಯಲು ನೆರವಾದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Leave A Reply

Your email address will not be published.