ಸುಬ್ರಹ್ಮಣ್ಯ, ಪಂಜ : ಗಾಳಿಮಳೆಗೆ ಅಪಾರ ಹಾನಿ

ಕಡಬ ತಾಲೂಕಿ ನಾದ್ಯಂತ ಬುಧವಾರ ಸಂಜೆಯ ಗುಡುಗು ಸಹಿತ ಬಾರೀ ಗಾಳಿ ಮಳೆಗೆ ಮನೆ, ವಿದ್ಯುತ್‌ ಕಂಬ, ಕೃಷಿಗೆ ಹಾನಿಯಾಗಿದ್ದು, ಘಟನಾ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿದರು.

ಸುಬ್ರಹ್ಮಣ್ಯ ಹಾಗೂ ಪಂಜ ಪರಿಸರದಲ್ಲಿ ಗಾಳಿ ಮಳೆಗೆ ಅಪಾರ ಹಾನಿ ಉಂಟಾಗಿದೆ. ಐನೆಕಿದು ಗ್ರಾಮದ ಕೋಟೆ ವಿಜಯ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಏನೆಕಲ್ಲು ಗ್ರಾಮದಲ್ಲಿ ಅಂಗಡಿ ಶೀಟು ಗಾಳಿಗೆ ಹಾರಿ ಹೋಗಿವೆ. ಗ್ರಾ.ಪಂ. ಸಂಜೀವಿನಿ ಕಟ್ಟಡದ ಎದುರಿನ ತಾತ್ಕಾಲಿಕ ತರಕಾರಿ ಅಂಗಡಿ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.

ಪಂಜದ ಕೃಷ್ಣನಗರ ಕೂತ್ಕುಂಜ ಗ್ರಾಮದ ದಾಮೋದರ ಬೆಳ್ಚಪಾಡ ಎಂಬವರ ಮನೆ ಮೇಲೆ ಹಲಸಿನ ಮರದ ರೆಂಬೆ ಬಿದ್ದು ಮನೆ ಜಖಂಗೊಂಡಿದೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ಪಂಬೆತ್ತಾಡಿ ಗ್ರಾಮದ ಚಿದಾನಂದ ಅವರ ಮನೆ ಮೇಲೆ ರಬ್ಬರ್‌ ಮರಗಳು ಬಿದ್ದು ಹಾನಿಯಾಗಿದೆ. ಪಂಜ ದೇವಸ್ಥಾನದ ಗರಡಿಬೈಲು ನಾಗನಕಟ್ಟೆಗೆ ಮರ ಬಿದ್ದಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡ ಹಲವೆಡೆ ಮರಗಳನ್ನು ತೆರವುಗೊಳಿಸಲು ಸಹಕರಿಸಿತು. ಪಂಬೆತ್ತಾಡಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್‌ ಕುಮಾರ್‌ ಕರಿಕ್ಕಳ, ರಜೀತಾ ಭಟ್‌ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರ ಸಹಕಾರದೊಂದಿಗೆ ಮರಗಳ ತೆರವಿಗೆ ನೆರವಾದರು.

Leave A Reply

Your email address will not be published.