ಕೋರೋನಾ ಸೋಂಕಿತ ಅಮ್ಮನ ಜತೆ 3 ತಿಂಗಳ ಹಸುಳೆಯ ಪಾಲನೆಯಲ್ಲೂ ನಿರತ ನರ್ಸುಗಳು

ರಾಯ್ಪುರ : ಮೂರು ತಿಂಗಳ ಹಸುಳೆಯ ಅಮ್ಮನಿಗೆ ಕೋರೋನಾ ಸೋಂಕು ಬಂದು, ಈಗ ಅನಿವಾರ್ಯವಾಗಿ ನರ್ಸ್ ಗಳು ಮಗುವನ್ನೂ ಕೂಡಾ ಆರೈಕೆ ಮಾಡಬೇಕಾಗಿ ಬಂದಿರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಬಗೆಗಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹರಿದಾಡ್ತಿದೆ.

ಛತ್ತೀಸಗಢ ರಾಜ್ಯದ ರಾಯ್ಪುರದ ಏಮ್ಸ್ ಆಸ್ಪತ್ರೆಯಲ್ಲಿ ಮಗುವಿನ ತಾಯಿಗೆ ಕೊರೊನಾ ಸೋಂಕು ತಗುಲಿದ್ದು, ಮಹಿಳೆಯು ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಮ್ಮನ ಎದೆಯಪ್ಪಿಕೊಂದು ಮಲಗಿರಬೇಕಾದ ಕಂದಮ್ಮನಿಗೆ ಈಗ ಏಮ್ಸ್ ಆಸ್ಪತ್ರೆಯ ನರ್ಸ್ ಗಳೇ ಅಮ್ಮಂದಿರು. ಆಸ್ಪತ್ರೆಯ ಶಿಫ್ಟ್ ಬದಲಾದಂತೆ ಬೇರೊಬ್ಬ ನರ್ಸ್ ಮಗುವಿನ ಲಾಲನೆ ಪಾಲನೆಗೆ ತೊಡಗುತ್ತಾಳೆ. ಕೈ ಬದಲಾಗಬಹುದು, ಆದರೆ ಅದೇ ಮಾತೃತ್ವದ ಸ್ಪರ್ಶ! ನೆನಪಿಡಿ : ಇದನ್ನೆಲ್ಲ ಅವರು ಮಾಡುತ್ತಿರುವುದು ದೇಹದ ತುಂಬಾ ಸೋಂಕು ನಿರೋಧಕ ದಿರಿಸು ಹಾಕಿಕೊಂಡೆ !!

ಖುಷಿಯ ಸಂಗತಿ ಎಂದರೆ, ಈ ನರ್ಸಮ್ಮಗಳು ಮಗುವಿನ ಜತೆ ಎಷ್ಟು ಹೊಂದಿಕೊಂಡಿದ್ದಾರೆ ಎಂದರೆ ಅದನ್ನವರು ಡ್ಯೂಟಿ ಎಂದು ಮಾಡದೆ, ಸ್ವಂತ ಮಗುವಿನ ಹಾಗೆ ಪೋಷಣೆಗೆ ತೊಡಗಿದ್ದಾರೆ.

ತಮ್ಮ ತಮ್ಮ ಮನೆಯವರಿಂದ ದೂರ ಉಳಿದು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ಸಿಬ್ಬಂದಿ, ಮೂರು ತಿಂಗಳ ಕಂದಮ್ಮನಿಗೆ ಅಮ್ಮನಾಗಿದ್ದಾರೆ. ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಪರಸ್ಪರ ಶೇರ್ ಮಾಡಿಕೊಳ್ಳುತ್ತಿದ್ದಾರೆ.

Comments are closed.