ಹನುಮಾನ್ ಜಯಂತಿಯಂದೇ ರಾಮಮಂದಿರ ಟ್ರಸ್ಟ್ ನ ಲೋಗೋ ಲೋಕಾರ್ಪಣೆ ಏನೇನಿದೆ ಇದರಲ್ಲಿ ?

ನವದೆಹಲಿ, ಏಪ್ರಿಲ್ 9 :  ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡುವುದು ಮತ್ತು ಆ ನಂತರ ಅದರ ನಿರ್ವಹಣೆಯ ಹೊಣೆಯನ್ನು ಹೊರುವ ಸಲುವಾಗಿ ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಸರಕಾರದ ಮೂಲಕ ರಚನೆಗೊಂಡಿರುವ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತನ್ನ ನೂತನ ಲೋಗೋವನ್ನು ನಿನ್ನೆ ಬಿಡುಗಡೆಗೊಳಿಸಿದೆ.

ರಾಮನ ಬಂಟ ಹನುಮಾನ್ ಜಯಂತಿಯ ಪುಣ್ಯದಿನದಂದೇ ಟ್ರಸ್ಟ್ ಈ ಲೋಗೋವನ್ನು ಬಿಡುಗಡೆಗೊಳಿಸಿರುವುದು ಇನ್ನೊಂದು ವಿಶೇಷ. ಕೋರೋಣ ವ್ಯಾಧಿಯ ಕಾರಣದಿಂದ
ದೇಶಾದ್ಯಂತ ಲಾಕ್ ಡೌನ್ ಪರಿಸ್ಥಿತಿ ಇರುವುದರಿಂದ ಸರಳವಾಗಿ ಯಾವುದೇ ಸಮಾರಂಭವನ್ನು ಆಯೋಜಿಸದೇ ಅಯೋಧ್ಯೆಯಲ್ಲಿ ಈ ಲೋಗೋ ವನ್ನು ನಿನ್ನೆ ಬಿಡುಗಡೆಗೊಳಿಸಲಾಗಿದೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿವೆ.

ಸುತ್ತಲೂ ಸೂರ್ಯನ ಪ್ರಭಾವಲಯವಿದ್ದು ಮಧ್ಯದಲ್ಲಿ ಶ್ರೀರಾಮನ ಚಿತ್ರವನ್ನು ಹೊಂದಿರುವ ಮತ್ತು ಕೆಳಭಾಗದಲ್ಲಿ ‘ ರಾಮೋ ವಿಗ್ರಹವಾನ್ ಧರ್ಮಃ ’ (ಶ್ರೀರಾಮಚಂದ್ರ ಧರ್ಮದ ಪ್ರತಿರೂಪ) ಎಂಬ ಸಂಸ್ಕೃತ ವಾಕ್ಯವನ್ನು ಹೊಂದಿರುವ ಈ ಲೋಗೋದಲ್ಲಿ ರಾಮ ಸೇವಕ ಆಂಜನೇಯನಿಗೂ ಸ್ಥಾನವನ್ನು ಕಲ್ಪಿಸಲಾಗಿದೆ. ಲೋಗೋದ ಕೆಳತುದಿಯ ಎರಡೂ ಬದಿಗಳಲ್ಲಿ ಕೈಮುಗಿದು ಕುಳಿತಿರುವ ಆಂಜನೇಯನ ಲೋಕ ಪ್ರಿಯ ಭಂಗಿಯ ಚಿತ್ರ ಇದೆ. ಕೆಂಪು, ಹಳದಿ ಮತ್ತು ಕೇಸರಿ ಬಣ್ಣಗಳ ಸಮ್ಮಿಳಿತದಿಂದ ಈ ನೂತನ ಲೋಗೋ ರೂಪುಗೊಂಡಿದೆ.

ಈ ಹಿಂದೆvರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಮಮಂದಿರ ಪರವಾಗಿ ನೀಡಿದ್ದ ತನ್ನ ಐತಿಹಾಸಿಕ ತೀರ್ಪಿನಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ರಾಮ ಮಂದಿರದ ಮತ್ತು ವಿವಾದಿತ ಜಾಗದ ಸಂಪೂರ್ಣ ನಿರ್ವಹಣಾ ಜವಾಬ್ದಾರಿಯನ್ನು ನೋಡಿಕೊಳ್ಳಲು ಟ್ರಸ್ಟ್ ಒಂದನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಕೇಂದ್ರ ಸರಕಾರವು 15 ಜನ ಸದಸ್ಯರನ್ನೊಳಗೊಂಡ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ರಚಿಸಿತ್ತು . ಅಲ್ಲದೆ ಈ ಟ್ರಸ್ಟ್ ನ ಅಧ್ಯಕ್ಷರನ್ನಾಗಿ ಮಹಾಂತ ನೃತ್ಯ ಗೋಪಾಲ್ ದಾಸ್ ಅವರನ್ನು ನೇಮಿಸಿತ್ತು . ವಿಶ್ವ ಹಿಂದೂ ಪರಿಷತ್ ನಾಯಕ ಚಂಪತ್ ರಾಯ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಪೇಜಾವರ ಹಿರಿಯ ಶ್ರೀ ವಿಶ್ವೇಶತೀರ್ಥರ ಅನುಪಸ್ಥಿತಿಯಲ್ಲಿ ಪೇಜಾವರ ಕಿರಿಯ ಶ್ರೀಗಳಾಗಿರುವ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರೂ ಸಹ ಈ ಟ್ರಸ್ಟ್ ನ ಸದಸ್ಯರಾಗಿ ಆಯ್ಕೆಯಾಗಿದ್ದರು.

Leave A Reply

Your email address will not be published.