ದಕ್ಷಿಣ ಕನ್ನಡದ ಕೋರೋನಾದ ಸ್ಟೇಟಸ್ ರಿಪೋರ್ಟ್ | ಖುಷಿ ಪಡಲು ಕಾರಣಗಳಿವೆ

ಮಂಗಳೂರು : ಕೊರೋನಾ ರೋಗಕ್ಕೆ ಸಂಬಂಧಿಸಿ ದಂತೆ ಒಳ್ಳೆಯ ಸುದ್ದಿಯೊಂದು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ದೊರೆತ 8 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿಯಲ್ಲಿ ಎಲ್ಲವೂ ನೆಗೆಟಿವ್ ಆಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ತಿಳಿಸಿದ್ದಾರೆ.

ಇಂದು, ಗುರುವಾರ 92 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದ್ದು, ಇದುವರೆಗೆ ಒಟ್ಟು 38813 ಜನರನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ. ಗುರುವಾರದಂದು ಹೊಸದಾಗಿ 24 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಮಧ್ಯೆ ಇಬ್ಬರನ್ನು ಅಬ್ಸರ್ವೇಶನ್ ಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

3352 ಮಂದಿ ಇನ್ನೂ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ 12 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಒಟ್ಟು 2594 ಜನರು 28 ದಿನಗಳ ಹೋಂ ಕ್ವಾರಂಟೈನ್ ಅವಧಿಯನ್ನು ಇವತ್ತಿಗೆ ಪೂರೈಸಲಿದ್ದು, ಅವರಲ್ಲಿ ಕೊರೋನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

ಇದುವರೆಗೆ 356 ಮಂದಿಯ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಈ ಪೈಕಿ 12 ಪಾಸಿಟಿವ್, 344 ನೆಗೆಟಿವ್, 8 ಅ್ಯಕ್ಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಮೇರೆಗೆ ಸಾರ್ವಜನಿಕರು ಅಪರಿಚಿತರ ಜತೆ ಮಾತನಾಡುವಾಗ, ವ್ಯಾಪಾರ ಮಳಿಗೆಗೆ ಭೇಟಿ ನೀಡುವಾಗ, ಮನೆಯಿಂದ ಹೊರಬರುವಾಗ ಮಾಸ್ಕ್ ಬಳಸುವುದು ಸೂಕ್ತ. ಫೀವರ್ ಕ್ಲಿನಿಕ್ ಗಳಲ್ಲಿ ಜ್ವರದ ತಪಾಸಣೆ ಆರಂಭಗೊಂಡಿದ್ದು, ಇದುವರೆಗೆ 36 ಮಂದಿಯನ್ನು ತಪಾಸಣೆ ನಡೆಸಲಾಗಿದೆ. ಯಾವುದೇ ಶಂಕಿತ ಕೋವಿಡ್ 19 ಸೋಂಕು ಇರುವ ಪ್ರಕರಣಗಳು ದಾಖಲಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರು ತಿಳಿಸಿದ್ದಾರೆ.

Leave A Reply

Your email address will not be published.