ದೆಹಲಿಯ ಏಮ್ಸ್ ಆಸ್ಪತ್ರೆಯ ಕೊರೋನಾ ಸೋಂಕಿತ ವೈದ್ಯ ದಂಪತಿಗೆ ಗಂಡು ಮಗು

ನವದೆಹಲಿ : ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರ ಪತ್ನಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಮೊದಲು ವೈದ್ಯರಿಗೆ ಸೋಂಕು ಉಂಟಾಗಿತ್ತು. ಅವರು ಏಮ್ಸ್ ಆಸ್ಪತ್ರೆಯ ಶರೀರಶಾಸ್ತ್ರ ವಿಭಾಗದಲ್ಲಿ ವೈದ್ಯರಾಗಿದ್ದಾರೆ. ಆ ನಂತರ ಅವರಿಂದ ಅವರ ಪತ್ನಿಗೂ ಕೊರೋನಾ ಅಂಟಿಕೊಂಡಿತ್ತು. ಕೊರೋನಾ ಸೋಂಕು ಇರುವುದು ಪತ್ತೆಯಾದ ಕೂಡಲೇ ಪ್ರತ್ಯೇಕ ವಾರ್ಡ್ ಗೆ ಶಿಫ್ಟ್ ಮಾಡಿದ್ದರು. ತುಂಬು ಗರ್ಭಿಣಿ ನಿನ್ನೆ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.

ಕಳೆದ ವಾರ ಅವರಿಬ್ಬರಿಗೆ ಸೋದರನಿಗೆ ಕೊರೋನಾ ಪತ್ತೆಯಾಗಿತ್ತು. ಅವರ 25 ವರ್ಷದ ಪತ್ನಿ 9 ತಿಂಗಳ ತುಂಬು ಗರ್ಭಿಣಿಯಾಗಿದ್ದರು. ಈ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದ್ದು, ಅದು ಈವರೆಗೆ ಸೋಂಕು ಮುಕ್ತವಾಗಿದೆ.

ಈಗ ಹುಟ್ಟಿರುವ ತಾಯಿ ಮಗು ಇಬ್ಬರ ಆರೋಗ್ಯವೂ ಸ್ಥಿರವಾಗಿದ್ದು, ಮಗುವಿನಲ್ಲಿ ಇನ್ನೂ ಕೊರೋನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿಲ್ಲ. ಇಲ್ಲಿಯ ತನಕ ಮಗುವಿನ ಮೇಲೆ ಯಾವುದೇ ಪರೀಕ್ಷೆ ನಡೆಸಿಲ್ಲ, ಏನಾದರೂ ಲಕ್ಷಣ ಕಂಡು ಬಂದರೆ ಪರೀಕ್ಷೆ ಮಾಡುತ್ತೇವೆ ಎಂದು ಆಸ್ಪತ್ರೆಯ ವೈದ್ಯೆ ನೀರಜ ಭಾಟ್ಲಾ ಹೇಳಿಕೆ ನೀಡಿದ್ದಾರೆ. ಕೊರೋನಾ ಸೋಂಕಿತ ಮಹಿಳೆ ಒಂದೊಮ್ಮೆ ಮಗುವಿಗೆ ಜನ್ಮ ನೀಡಿದರೆ, ಆ ಮಗುವಿಗೆ ಮಗುವಿಗೆ ಕೊರೋನಾ ವೈರಸ್ ಸೋಂಕು ಬರುತ್ತದೆಯಾ ಇಲ್ಲವಾ ಎಂಬ ಬಗ್ಗೆ ಇನ್ನೂ ವೈದ್ಯಲೋಕಕ್ಕೆ ಮಾಹಿತಿ ಇಲ್ಲ. ಕೊರೋನಾ ವಿರುದ್ಧ ಕೆಲಸ ಮಾಡುತ್ತಿರುವ ವೈದ್ಯರ ಮಗುವಾದ ಈ ಪುಟಾಣಿ ಕಂದನಿಗೆ ಮಾರಕ ರೋಗ ತಟ್ಟದಿರಲೆಂದೇ ಕೋಟ್ಯಂತರ ಜನರ ಹಾರೈಕೆ.

Leave A Reply

Your email address will not be published.