ಮಂಗಳೂರು । ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಪತ್ತೆ ಪ್ರಯೋಗಾಲಯ ಆರಂಭ

ಮಂಗಳೂರು : ನಗರದಲ್ಲಿ ಕೊರೊನಾ ವೈರಸ್‌ ಸೇರಿದಂತೆ ವೈರಾಣು ಪತ್ತೆ ಪ್ರಯೋಗಾಲಯಕ್ಕೆ ಸರ್ಕಾರದಿಂದ ಮಂಜೂರಾತಿ ಆವಾಗಲೇ ಸಿಕ್ಕಿತ್ತು. ಈಗ ಇಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭಿಸಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಕೋವಿಡ್‌-19 ಪ್ರಕರಣ ಹೆಚ್ಚುತ್ತಿರುವುದರಿಂದ ಮತ್ತು ಒಟ್ಟಾರೆ ದೇಶದೊಳಗೆ ಪರೀಕ್ಷಾ ಪ್ರಯೋಗಾಲಯಗಳು ಕಡಿಮೆ ಇರುವುದರಿಂದ ಎಲ್ಲ ಜಿಲ್ಲೆಗಳಲ್ಲೂ ಪ್ರಯೋಗಾಲಯ ತೆರೆಯುವ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ನಗರಕ್ಕೆ ಭೇಟಿ ನೀಡಿದ ಸಂದರ್ಭ ಭರವಸೆ ನೀಡಿದ್ದರು. ಅಲ್ಲದೆ ಮಂಗಳೂರಿನಂತಹ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ಮತ್ತು ಹಲವು ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಪ್ರಮುಖ ನಗರದಲ್ಲಿ ಪ್ರಯೋಗಾಲಯದ ಅಗತ್ಯ ಇತ್ತು.

ಸರಕಾರ ಈ ಹಿಂದೆ ತೆಗೆದುಕೊಂಡ ನಿರ್ಧಾರದಂತೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಪ್ರಯೋಗಾಲಯ ಆರಂಭವಾಗಿದೆ. ಈ ಪ್ರಯೋಗಾಲಯವು ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ (ಐಸಿಎಂಆರ್) ನೋಂದಣಿಯಾಗಬೇಕಿದ್ದು, ಕೆಲವು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆನಂತರ ಪ್ರಯೋಗಾಲಯವು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ.

ಈ ಪ್ರಾಯೋಗಿಕ ಪ್ರಯೋಗಾಲಯದಲ್ಲಿ ಏನಿಲ್ಲ ಪರೀಕ್ಷೆಗಳನ್ನು ಮಾಡುತ್ತಾರೆ?

1) ಜಿಲ್ಲಾ ಸರ್ವೇಕ್ಷಣಾ ವಿಭಾಗದವರು ಕಳುಹಿಸಿದ ಮಾದರಿಗಳನ್ನು ಮಾತ್ರ ಇಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ರೋಗಿಯ ಗಂಟಲು ದ್ರವ (ಸ್ವಾ ಬ್) ಮಾದರಿಯನ್ನು ಇಲ್ಲಿ ಈಗ ತಪಾಸಣೆ ಮಾಡಲಾಗುವುದಿಲ್ಲ.

ಈವರೆಗೆ ಕೊರೊನಾ ವೈರಸ್‌ ಶಂಕಿತರ ಗಂಟಲು ದ್ರವದ ಮಾದರಿಯನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ. ಸ್ಯಾಂಪಲ್ ಅಲ್ಲಿಗೆ ತಲುಪಿ ಅನಾಲಿಸಿಸ್ ಮಾಡಿ ರಿಸಲ್ಟ್ ತಲುಪಲು ಮೂರರಿಂದ ನಾಲ್ಕು ದಿನಗಳು ತಗಲುತ್ತವೆ. ಪೂರ್ಣಪ್ರಮಾಣದ ಲ್ಯಾಬ್ ಇಲ್ಲಿಯೇ ಆದ ನಂತರ ಒಂದೇ ದಿನದಲ್ಲಿ ಫಲಿತಾಂಶ ಸಿಗಲಿದೆ.

ಡಾ.ಶರತ್ ಕುಮಾರ್, ಡಾ. ಮಧುಸೂದನ್ ಅವರೊಂದಿಗೆ ಇತರ ಮೂವರು ಸಿಬ್ಬಂದಿ ಸೇರಿ ಒಟ್ಟು ಐದು ಮಂದಿ ಪ್ರಯೋಗಾಲಯದ ತಂಡದಲ್ಲಿದ್ದು ಇವರಿಗೆ ಹಾಸನ ಮತ್ತು ಮೈಸೂರಿನ ಪ್ರಯೋಗಾಲಯಗಳಲ್ಲಿ ಈಗಾಗಲೇ ತರಬೇತಿ ನೀಡಲಾಗಿದೆ. ಅಲ್ಲದೆ ಎನ್‌ಐಟಿಕೆ ಸುರತ್ಕಲ್, ಮೀನುಗಾರಿಕಾ ಕಾಲೇಜು ಮತ್ತು ಮಂಗಳೂರು ವಿಶ್ವವಿದ್ಯಾಲಯದ ವಿಜ್ಞಾನಿಗಳು, ವೆನ್ಲಾಕ್ ಆಸ್ಪತ್ರೆಯ ವೈದ್ಯರಿಗೆ ಸಲಹೆ ಸಹಕಾರ ನೀಡುತ್ತಿದ್ದಾರೆ.

ಇವತ್ತು ನಡೆದ ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ, ವೆನ್ಲಾಕ್‌ ಅಧೀಕ್ಷಕ ಡಾ.ಸದಾಶಿವ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಇದ್ದರು.

Leave A Reply

Your email address will not be published.